ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ದೊಡ್ಡ ಹೊಡೆತಗಳನ್ನು ಬಾರಿಸುವ ಅದ್ಭುತ ಕಲೆಯನ್ನು ಹೊಂದಿದ್ದರು. ಆ ಕಾರಣದಿಂದಲೇ ಅವರನ್ನು ನಾನು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಬಡ್ತಿ ನೀಡಿದ್ದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಭಾರತಕ್ಕೆ 2 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿರುವ ಎಂಎಸ್ ಧೋನಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಗಂಗೂಲಿ ನಾಯಕತ್ವದಲ್ಲಿ ಆಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ದಾದಾ 2005ರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿದ್ದರು. ಆ ಇನ್ನಿಂಗ್ಸ್ ಧೋನಿಯ ವೃತ್ತಿ ಜೀವನವನ್ನೇ ಬದಲಾಯಿಸಿತು. ಆ ಪಂದ್ಯದಲ್ಲಿ ಧೋನಿ 148 ರನ್ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
'ಅವರು (ಧೋನಿ) ವೈಜಾಕ್ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದರು. ಆ ಪಂದ್ಯದಲ್ಲಿ ಸೂಪರ್ ಸೆಂಚುರಿ ಬಾರಿಸಿದರು. ಅಷ್ಟೇ ಅಲ್ಲ ಧೋನಿ ಮೇಲಿನ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಾಗಲೆಲ್ಲಾ ಹೆಚ್ಚು ರನ್ ಬಾರಿಸುತ್ತಿದ್ದರು. ತೆಂಡೂಲ್ಕರ್ 6ನೇ ಕ್ರಮಾಂಕದಲ್ಲಿ ಬೆರಳೇಣಿಕೆಯ ಎಸೆತಗಳನ್ನು ಆಡಿದ್ದರೆ ಅವರು ಇಂದು ತೆಂಡೂಲ್ಕರ್ ಆಗಿ ಉಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಧೋನಿ ಒಬ್ಬ ಅಪರೂಪದ ಕ್ರಿಕೆಟಿಗ ಎಂದ ಬಣ್ಣಿಸಿದ್ದಾರೆ.
ಚಾಲೆಂಜರ್ ಟ್ರೋಫಿಯಲ್ಲಿ ನನ್ನ ತಂಡದಲ್ಲಿ ಧೋನಿ ಆರಂಭಿಕನಾಗಿ ಬ್ಯಾಟಿಂಗ್ ನಡೆಸಿ ಸೆಂಚುರಿ ಸಿಡಿಸಿದ್ದರು. ಹಾಗಾಗಿ ನನಗೆ ಧೋನಿ ಬಗ್ಗೆ ತಿಳಿದಿದೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿ ಸಾಕಷ್ಟು ಬಾರಿ ಧೋನಿ ಮೇಲಿನ ಕ್ರಮಾಂಕದಲ್ಲಿ ಆಡುವಂತೆ ಹೇಳಿಕೆ ನೀಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲೀ ಗೌತಮ್ ಗಂಭೀರ್ ಕೂಡ ಧೋನಿ ಬಗ್ಗೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಧೋನಿ 3 ನೇ ಕ್ರಮಾಂದಲ್ಲಿ ಬ್ಯಾಟಿಂಗ್ ಕ್ರಿಕೆಟ್ ಜಗತ್ತಿನ ಹಲವಾರು ದಾಖಲೆಗಳು ಪತನವವಾಗುತ್ತಿದ್ದವು ಎಂದು ಅವರು ತಿಳಿಸಿದ್ದರು.