ದಿಂಡಿಗಲ್(ತಮಿಳುನಾಡು): ಕರ್ನಾಟಕದ ಯುವ ಆಟಗಾರ ದೇವದತ್ ಪಡಿಕ್ಕಲ್ ರಣಜಿ ಕ್ರಿಕೆಟ್ನಲ್ಲೂ ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರಿಸಿದ್ದಾರೆ.
ತಮಿಳುನಾಡಿನ ವಿರುದ್ಧದ ರಣಜಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಕರ್ನಾಟಕ ತಂಡ ದೇವದತ್ ಪಡಿಕ್ಕಲ್ ಹಾಗೂ ಪವನ್ ದೇಶಪಾಂಡೆ ಅವರ ಅರ್ಧಶತಕದ ನೆರವಿನಿಂದ 204 ರನ್ಗಳಿಸಿ ಬ್ಯಾಟಿಂಗ್ ಮುಂದುವರಿಸಿದೆ.
ಇದೇ ವರ್ಷದಲ್ಲಿ ನಡೆದ 50 ಓವರ್ಗಳ ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಗರಿಷ್ಠ ಸ್ಕೋರರ್ ಆಗಿದ್ದ ಪಡಿಕ್ಕಲ್ ಇಂದಿನಿಂದ ಆರಂಭವಾಗಿರುವ ರಣಜಿಯಲ್ಲೂ 78 ರನ್ಗಳಿಸಿ ಮಿಂಚಿದ್ದಾರೆ. ಆದರೆ ತಮ್ಮ ಚೊಚ್ಚಲ ಶತಕಗಳಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡಿದ್ದಾರೆ.
19 ವರ್ಷದ ಪಡಿಕ್ಕಲ್ ವಿಜಯ್ ಹಜಾರೆಯಲ್ಲಿ 11 ಪಂದ್ಯಗಳಿಂದ 2 ಶತಕ ಹಾಗೂ 5 ಅರ್ಧಶತಕ ಸೇರಿದಂತೆ 609 ರನ್ಗಳಿಸಿದರೆ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 12 ಪಂದ್ಯಗಳಿಂದ 580 ರನ್ ಗಳಿಸಿ, ಟಾಪ್ ಸ್ಕೋರರ್ ಎನಿಸಿಕೊಂಡಿದ್ದರು. ಇವೆರಡೂ ಟ್ರೋಫಿಗಳು ಕರ್ನಾಟಕದ ಪಾಲಾಗಿದ್ದವು.
ಇದೀಗ ರಣಜಿ ಕ್ರಿಕೆಟ್ನಲ್ಲೂ ಆಡಿದ ಮೊದಲ ಪಂದ್ಯದಲ್ಲೇ 78 ರನ್ಗಳಿಸಿದ್ದು, ರಣಜಿ ಕ್ರಿಕೆಟ್ನಲ್ಲೂ ತಮ್ಮ ಬ್ಯಾಟಿಂಗ್ ಪ್ರದರ್ಶನ ಕಾಯ್ದುಕೊಂಡಿರುವುದು ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ.