ಬೆಂಗಳೂರು: ಪ್ರಸಿದ್ ಕೃಷ್ಣ ಮಾರಕ ದಾಳಿ ಹಾಗೂ ಯುವ ಆಟಗಾರ ದೇವದತ್ ಪಡಿಕ್ಕಲ್ ಶತಕದ ನೆರವಿನಿಂದ ಕರ್ನಾಟಕ ತಂಡ ಸೌರಾಷ್ಟ್ರ ತಂಡವನ್ನು 8 ವಿಕೆಟ್ಗಳ ಮಣಿಸಿ ತನ್ನ ವಿಜಯ ಯಾತ್ರೆಯನ್ನು ಮುಂದುವರಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವಿಜಯ ಹಜಾರೆ ಟ್ರೋಪಿಯ ಪಂದ್ಯಲ್ಲಿ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಮನೀಷ್ ಪಾಂಡೆ ಪಡೆ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಸೌರಾಷ್ಟ್ರ ಪಡೆ ಪ್ರಸಿದ್ ಹಾಗೂ ಕೌಶಿಕ್ ದಾಳಿಗೆ ಸಿಲುಕಿ ಕೇವಲ 37 ರನ್ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಅಘಾತ ಅನುಭವಿಸಿತ್ತು. ಆದರೆ, 7ನೇ ವಿಕೆಟ್ ಜೊತೆಯಾಟದಲ್ಲಿ ಪ್ರೇರಕ್ ಮಂಕಡ್ (86) ಹಾಗೂ ಚಿರಾಗ್ ಜನಿ(66)150 ರನ್ ಸೇರಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಜೊತೆಗೆ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಕರ್ನಾಟಕ ಪರ ಪ್ರಸಿದ್ ಕೃಷ್ಣ 5 ವಿಕೆಟ್, ವಿ ಕೌಶಿಕ್ 3, ಕೆ ಗೌತಮ್ ಹಾಗೂ ಗೋಪಾಲ್ ತಲಾ ಒಂದು ವಿಕೆಟ್ ಪಡೆದರು. 213 ರನ್ಗಳ ಟಾರ್ಗೆಟ್ ಪಡೆದ ಮನೀಷ್ ಪಡೆ 36.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ದೇವದತ್(103) ಶತಕ ಸಿಡಿಸಿದರೆ ನಾಯಕ ಪಾಂಡೆ ಔಟಾಗದೆ 67 ರನ್ ಗಳಿಸಿ ಗೆಲುವಿನ ಗಡಿ ದಾಟಿಸಿದರು.
104 ಎಸೆತಗಳನ್ನೆದುರಿಸಿದ ದೇವದತ್ ಪಡಿಕ್ಕಲ್ 13 ಬೌಂಡರಿ 1 ಸಿಕ್ಸರ್ ನೆರವಿನಿಂದ 103 ರನ್ಗಳಿಸಿದರೆ, ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಮನೀಷ್ ಪಾಂಡೆ 53 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 67 ರನ್ ಗಳಿಸಿದರು.