ಮೆಲ್ಬೋರ್ನ್: ಆಸ್ಟ್ರೇಲಿಯಾ ಸ್ಟಾರ್ ಓಪನರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ದೀರ್ಘಾವಧಿ ಕ್ರಿಕೆಟ್ನಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಸಲುವಾಗಿ ಟಿ20 ಕ್ರಿಕೆಟ್ನಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಗಮನ ನೀಡುವುದಕ್ಕಾಗಿ 2019-20ರ ಬಿಗ್ಬ್ಯಾಷ್ ಲೀಗ್ನಿಂದ ಹಿಂದೆ ಸರಿದಿದ್ದ ವಾರ್ನರ್, 2020-2021ರಲ್ಲಿ ಸತತವಾಗಿ ನಡೆಯುವ ಎರಡು ಟಿ20 ವಿಶ್ವಕಪ್ಗಳ ನಂತರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.
"ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಕಡೆ ನೋಡುವುದಾದರೆ, ಒಂದರ ಹಿಂದೊಂದು ಟಿ20 ವಿಶ್ವಕಪ್‌ಗಳು ನಡೆಯಲಿವೆ. ಹೀಗಾಗಿ ಇನ್ನು ಕೆಲವೇ ವರ್ಷಗಳಲ್ಲಿ ಈ ಮಾದರಿಯ ಕ್ರಿಕೆಟ್ ಆಡುವುದನ್ನು ನಿಲ್ಲಿಸಲಿದ್ದೇನೆ" ಎಂದು ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಮೂರು ಫಾರ್ಮೆಟ್ ಕ್ರಿಕೆಟ್ನಲ್ಲಿ ಆಡುವುದು ತುಂಬಾ ಕಷ್ಟ. ಈ ಮಾದರಿಯಲ್ಲಿ ಆಟ ಮುಂದುವರಿಸುವ ಆಟಗಾರರಿಗೆ ಒಳ್ಳೆಯದಾಗಲಿ ಎನ್ನುತ್ತಾ, ಎಲ್ಲಾ ಮಾದರಿಯ ಕ್ರಿಕೆಟ್ ಆಡುವುದರಿಂದ ಕುಟುಂಬದಿಂದ ಹೆಚ್ಚು ಹೊರಗುಳಿಯಬೇಕಾಗುತ್ತದೆ. ಮೂರು ಮಕ್ಕಳು ಮತ್ತು ಪತ್ನಿ ಮನೆಯಲ್ಲಿ ಉಳಿಯುವುದರಿಂದ ಸದಾ ಪ್ರವಾಸದಲ್ಲಿ ಇರುವುದು ಕಷ್ಟವಾಗಿದೆ. ಹೀಗಾಗಿ ಈ ಮಾದರಿಯ ಕ್ರಿಕೆಟ್ನ್ನು ತ್ಯಜಿಸುವ ಆಲೋಚನೆಯಲ್ಲಿದ್ದೇನೆ ಎಂದು ವಾರ್ನರ್ ಹೇಳಿಕೊಂಡಿದ್ದಾರೆ.