ರಾಂಚಿ: ಯುಎಇಗೆ ತೆರಳಲಿರುವ ಮುನ್ನ 5 ಬಾರಿ ಕೋವಿಡ್ 19 ಪರೀಕ್ಷೆಗೆ ಒಳಗಾಗಬೇಕಾಗಿರುವುದರಿಂದ ಚೆನ್ನೈ ಸೂಪರ್ಕಿಂಗ್ಸ್ ನಾಯಕ ಎಂಎಸ್ ಧೋನಿ ಬುಧವಾರ ಪರೀಕ್ಷೆಗೆ ಒಳಗಾಗಿದ್ದಾರೆ.
ಯುಎಇಗೆ ತೆರಳುವ ಮುನ್ನ ಸಿಎಸ್ಕೆ ಆಟಗಾರರು ಚೆನ್ನೈಗೆ ಬರಬೇಕಿದೆ. ಈ ವೇಳೆ ಎರಡು ಬಾರಿ ಎಲ್ಲ ಆಟಗಾರರು ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಪಡೆಯಬೇಕಿದೆ. ಚೆನ್ನೈಗೆ ತೆರಳಿದ ನಂತರ ಮತ್ತೆ ಮೂರು ಬಾರಿ ಕೋವಿಡ್ 19 ಪರೀಕ್ಷೆಗೆ ಒಳಗಾಗಲಿದ್ದಾರೆ. ಒಟ್ಟು 5 ಬಾರಿ ಕೋವಿಡ್ ಟೆಸ್ಟ್ನಲ್ಲಿ ಭಾಗಿಯಾದ ನಂತರ ಯುಎಇಗೆ ಹಾರಲಿದ್ದಾರೆ.
ಭಾರತ ತಂಡದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕನಾಗಿರುವ ಎಂಎಸ್ ಧೋನಿ ಬುಧವಾರ ರಾಂಚಿಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ಫಲಿತಾಂಶ ಗುರುವಾರ ಬರುವ ನಿರೀಕ್ಷೆಯಿದೆ.
39 ವರ್ಷದ ಧೋನಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಯಾವುದೇ ಮಾದರಿಯ ಕ್ರಿಕೆಟ್ನಲ್ಲೂ ಕಾಣಿಸಿಕೊಂಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಭಾರತದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ನಿರ್ವಹಿಸುತ್ತಿದ್ದಾರೆ.
ಇನ್ನು ಧೋನಿ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 10 ಬಾರಿ ಮುನ್ನಡೆಸಿದ್ದು, 10 ಬಾರಿ ಪ್ಲೇ ಆಫ್, 8 ಬಾರಿ ಫೈನಲ್ ಹಂತಕ್ಕೆ ಕೊಂಡೊಯ್ದಿದ್ದಾರೆ. ಅದರಲ್ಲಿ 3 ಬಾರಿ ಚಾಂಪಿಯನ್ ಹಾಗೂ 5 ಬಾರಿ ರನ್ನರ್ ಅಪ್ ಆಗಿದ್ದಾರೆ.
ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳುವ ಐಪಿಎಲ್ ಟೂರ್ನಿಯ ಪಂದ್ಯಗಳು ದುಬೈ, ಅಬುಧಾಬಿ ಮತ್ತು ಶಾರ್ಜಾ ತಾಣಗಳಲ್ಲಿ ನಡೆಯಲಿವೆ. ನವೆಂಬರ್ 10ರಂದು ಫೈನಲ್ ಪಂದ್ಯ ನಡೆಯಲಿದೆ.