ನವದೆಹಲಿ: ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಕ್ರಿಕೆಟ್ ಶಿಶು ಎನಿಸಿಕೊಂಡಿದ್ದ ಟೀಮ್ ಇಂಡಿಯಾ ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ ಇಡೀ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿತ್ತು.
ಹಿಂದಿನ 2 ವಿಶ್ವಕಪ್ಗಳಲ್ಲಿ ಒಂದೂ ಗೆಲುವನ್ನು ಕಾಣದ ಭಾರತ ತಂಡ 3ನೇ ಏಕದಿನ ವಿಶ್ವಕಪ್ನಲ್ಲಿ ಅಚ್ಚರಿಯ ಪ್ರದರ್ಶನ ನೀಡಿತ್ತು ಹಂತ ಹಂತದಲ್ಲೂ ಬಲಿಷ್ಠ ತಂಡಗಳಿಗೆ ಸೋಲುಣಿಸುತ್ತಾ ವಿಶ್ವಕಪ್ ಎತ್ತಿ ಹಿಡಿದಿತ್ತು. 1983 ವಿಶ್ವಕಪ್ ವಿಜೇತ ತಂಡದಲ್ಲಿದ್ದ ಕೀರ್ತಿ ಅಜಾದ್ ಸೆಮಿಫೈನಲ್ನಲ್ಲಿ ವೇಳೆ ನಡೆದ ಸ್ವಾರಸ್ಯಕರ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಭಾರತ ಚೊಚ್ಚಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡ ಎಂದು ಬಿಬಿಸಿ ಯಲ್ಲಿ ಚರ್ಚೆ ಸಾಗಿತ್ತು. ಅವರು ಫೈನಲ್ ಪ್ರವೇಶಿಸಿ ಅಲ್ಲಿ ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್ಗಳನ್ನು ಹೇಗೆ ಎದುರಿಸಬೇಕು ಎಂದು ಲೆಕ್ಕಾಚಾರ ಮಾಡತೊಡಗಿದ್ದರು. ಅದರೆ ಭಾರತ ಎಲ್ಲರ ಅಭಿಪ್ರಾಯಗಳನ್ನು ತಲೆಕೆಳಗಾಗಿಸಿತ್ತು. ಅತಿಥೇಯರನ್ನು 6 ವಿಕೆಟ್ಗಳಿಂದ ಬಗ್ಗುಬಡಿದು ಫೈನಲ್ ಪ್ರವೇಶಿಸಿತ್ತು. ಆ ಪಂದ್ಯದಲ್ಲಿ ಇಯಾನ್ ಬಾಥಮ್ ವಿಕೆಟ್ ಪಡೆದಿದ್ದ ಕೀರ್ತಿ ಅಜಾದ್ಗೆ ಪಂದ್ಯ ವೀಕ್ಷಿಸುತ್ತಿದ್ದ ಭಾರತೀಯ ಅಭಿಮಾನಿಗಳು 250 ಪೌಂಡ್ಗಳನ್ನು ಬಹುಮಾನವಾಗಿ ನೀಡಿದ್ದರೆಂಬ ವಿಚಾರವನ್ನು ಅವರು ಅಜಾದ್ ಹೇಳಿಕೊಂಡಿದ್ದಾರೆ.
"ನಾವು ಸೆಮಿಫೈನಲ್ ಆಡಬೇಕಿದ್ದ ಹಿಂದಿನ ದಿನ ಬಿಬಿಸಿಯಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಇಂಗ್ಲೀಷ್ ಆಟಗಾರರಾದ ಗ್ರಹಾಂ ಫೌಲರ್ ಮತ್ತು ಕ್ರಿಸ್ ತವಾರೆ ಭಾರತ ತಂಡವನ್ನು ಉಲ್ಲೇಖಿಸದೆ, ಈಗಾಗಲೆ ಫೈನಲ್ ಪ್ರವೇಶಿಸಿದಂತೆ ವೆಸ್ಟ್ ಇಂಡೀಸ್ನ ಮೈಕೆಲ್ ಹೋಲ್ಡಿಂಗ್ ಮತ್ತು ಆ್ಯಂಡಿ ರಾಬರ್ಟ್ಸ್ ಅವರನ್ನು ಹೇಗೆ ಎದುರಿಸಲಿದ್ದಾರೆ ಎಂಬುದರ ಬಗ್ಗೆ ಮಾತನಾಡುತ್ತಿದ್ದರು. ಇದು ನಮ್ಮ ಅಹಂಗೆ ಪೆಟ್ಟುಬಿದ್ದಂತಾಗಿತ್ತು. ನಾವೂ ಕೂಡ ಇಲ್ಲಿಯವರೆಗೆ ಬರುತ್ತೇವೆಂದು ಭಾವಿಸಿರಲಿಲ್ಲ ಆದರೆ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಲು ಯಶಸ್ವಿಯಾಗಿದ್ದೆವು"
ಈ ಸಂದರ್ಭದಲ್ಲಿ ಇಂಗ್ಲೀಷರ ಶ್ರೇಷ್ಠ ಆಲ್ರೌಂಡರ್ ಇಯಾನ್ ಬಾಥಮ್ ವಿಕೆಟ್ ಪಡೆದಿದ್ದೆ. ಅದು ನನಗೂ ಅಚ್ಚಿಯಾಗಿತ್ತು. ಈ ಸಂದರ್ಭದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಭಾರತೀಯ ಅಭಿಮಾನಿಗಳು ನನ್ನ ಬಳಿ ಬಂದು ಕೆಲವರು 2 ಪೌಂಡ್, ಕೆಲವರು 3, 5 ಪೌಂಡ್ನ ನೋಟುಗಳನ್ನು ನನ್ನ ಜೇಬಿಗೆ ಹಾಕುತ್ತಿದ್ದರು. ಒಟ್ಟಾರೆ 250 ಪೌಂಡ್ ಇಯಾನ್ ಬಾಥಮ್ ವಿಕೆಟ್ ಪಡೆದಿದ್ದಕ್ಕೇ ನನಗೆ ಬಹುಮಾನವಾಗಿ ಅಭಿಮಾನಿಗಳಿಂದ ಸಿಕ್ಕಿತ್ತು ಎಂದು ಅಜಾದ್ ಖಾಸಗಿ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.