ಮುಂಬೈ: ದಕ್ಷಿಣ ಆಫ್ರಿಕಾ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಮತ್ತೆ ಹರಿಣ ಪಡೆಯನ್ನು ಮುನ್ನಡೆಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ರನ್ನು ಸ್ವತಃ ದಕ್ಷಿಣ ಆಫ್ರಿಕಾ ಮಂಡಳಿಯೇ ತಂಡಕ್ಕೆ ವಾಪಸ್ ಆಗಿ ನಾಯಕತ್ವ ವಹಿಸುವಂತೆ ಕೇಳಿಕೊಂಡಿದೆ ಎಂದು ತಿಳಿದುಬಂದಿದೆ.
ವಿಲಿಯರ್ಸ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ, ಮತ್ತೆ ವಿಶ್ವಕಪ್ ವೇಳೆ ತಂಡಕ್ಕೆ ಸೇರ್ಪಡೆಯಾಗಲು ಉತ್ಸಾಹ ತೋರಿದರಾದರೂ ದ.ಆ. ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿರಲಿಲ್ಲ. ನಂತರ ಮಾರ್ಕ್ ಬೌಷರ್ ಕೋಚ್ ಆಗಿ ನೇಮಕಗೊಂಡ ಮೇಲೆ ಮತ್ತೆ ನಿವೃತ್ತಿಯಾಗಿರುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ಬಲಿಷ್ಠ ತಂಡ ಕಟ್ಟುವ ನಿರ್ಧಾರ ಮಾಡಿದ್ದರು.
ನನಗೂ ದಕ್ಷಿಣ ಆಫ್ರಿಕಾ ತಂಡದ ಪರ ಆಡಬೇಕೆಂಬ ಆಸೆಯಿದೆ. ಇದೀಗ ಕ್ರಿಕೆಟ್ ಮಂಡಳಿಯೇ ನನ್ನಲ್ಲಿ ಮತ್ತೆ ನಾಯಕನನ್ನಾಗುವಂತೆ ಕೇಳಿಕೊಂಡಿದೆ. ಆದರೆ ನಾನು ಫಾರ್ಮ್ಗೆ ಮರಳಿ ಇತರೆ ಆಟಗಾರರಿಗಿಂತ ಉತ್ತಮ ಎನಿಸಿದರೆ ಮಾತ್ರ ಮತ್ತೆ ಆಡುವ 11ರಬಳಗಕ್ಕೆ ಸೇರಿಕೊಳ್ಳಲಿದ್ದೇನೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿಲಿಯರ್ಸ್ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಪಂದ್ಯ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 9577, ಟಿ-20 ಯಲ್ಲಿ 1672, ಟೆಸ್ಟ್ನಲ್ಲಿ 8765 ರನ್ಗಳಿಸಿದ್ದಾರೆ.