ಆಕ್ಲೆಂಡ್: ಕಿವೀಸ್ನ ಆಲ್ರೌಂಡರ್ ಕೋರಿ ಆ್ಯಂಡರ್ಸನ್ ನ್ಯೂಜಿಲ್ಯಾಂಡ್ ತಂಡ ತ್ಯಜಿಸಿದ್ದು, ಅಮೆರಿಕ ಪರ ಆಡಲು ತೀರ್ಮಾನಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 2ನೇ ವೇಗದ ಶತಕದ ದಾಖಲೆ ಹೊಂದಿರುವ ಆ್ಯಂಡರ್ಸನ್ 2022ಕ್ಕೆ ಅಮೆರಿಕದಲ್ಲಿ ಶುರುವಾಗಲಿರುವ ಮೇಜರ್ ಕ್ರಿಕೆಟ್ ಲೀಗ್ನಲ್ಲಿ ಆಡಲು ಮೂರು ವರ್ಷದ ಅವಧಿಯ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಇದೀಗ ಅಮೆರಿಕ ರಾಷ್ಟ್ರೀಯ ತಂಡದ ಪರ ಅವರು ಆಡಲಿದ್ದಾರೆ ಎಂದು ತಿಳಿದುಬಂದಿದೆ.
ಆಂಡರ್ಸನ್ ಪ್ರೇಯಸಿ ಮೇರಿ ಶಂಬರ್ಗರ್ ಅಮೆರಿಕ ನಿವಾಸಿ. ಅಲ್ಲದೆ ಕೋವಿಡ್ ಸಮಯoಲ್ಲಿ ಕೋರಿ ತನ್ನ ಹೆಚ್ಚಿನ ಸಮಯವನ್ನು ಶಂಬರ್ಗರ್ ಅವರ ತವರಾದ ಟೆಕ್ಸಾಸ್ನಲ್ಲಿ ಕಳೆದಿದ್ದಾರೆ.
ಅಮೆರಿಕದ ಪ್ಲಾನ್ ಏನು?
ಯುಎಸ್ ಕ್ರಿಕೆಟ್ ಮಂಡಳಿ ಏಕದಿನ ಕ್ರಿಕೆಟ್ ಸ್ಥಾನಮಾನ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದೆ. ಇದಕ್ಕಾಗಿ ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಕ್ರಿಯವಾಗಿರುವ ಆಟಗಾರರನ್ನು ಕಣಕ್ಕಿಳಿಸಲು ಬಯಸಿದೆ. ಈ ಕಾರಣದಿಂದ ಅವಕಾಶ ವಂಚಿತರಾಗಿರುವ ಕೆಲವು ಆಟಗಾರರಿಗೆ ಅವಕಾಶ ನೀಡಿದೆ.
ಅಮೆರಿಕ ತಂಡ ಸೇರಿದ ಪಾಕ್ ಕ್ರಿಕೆಟಿಗ:
ಆ್ಯಂಡರ್ಸನ್ಗೂ ಮುನ್ನ ಪಾಕಿಸ್ತಾನದ 24 ವರ್ಷದ ಸಮಿ ಅಸ್ಲಾಮ್ ಕೂಡ 2 ದಿನಗಳ ಹಿಂದೆ ಪಾಕಿಸ್ತಾನ ತಂಡಕ್ಕೆ ರಾಜೀನಾಮೆ ನೀಡಿ ಯುಎಸ್ ತಂಡದ ಪರ ಆಡುವ ನಿರ್ಧಾರ ತೆಗೆದುಕೊಂಡಿದ್ದರು. ಅದಕ್ಕಾಗಿ ಅವರು ಈಗಾಗಲೇ ಅಮೆರಿಕಗೆ ತೆರಳಿದ್ದಾರೆ.
ಇಂಗ್ಲೆಂಡ್ ತಂಡದ ಲಿಯಾಮ್ ಪ್ಲಂಕೆಟ್, ದಕ್ಷಿಣ ಆಫ್ರಿಕಾದ ರಸ್ಟಿ ಥೇರನ್, ಡೇನ್ ಪೀಡ್ಟ್ ಕೂಡ ಈಗಾಗಲೇ ಅಮೆರಿಕ ಕ್ರಿಕೆಟ್ ಬೋರ್ಡ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.