ಲಂಡನ್: 2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಧರಿಸಿದ್ದ ಫುಲ್ ಜರ್ಸಿ ಬರೋಬ್ಬರಿ 80 ಸಾವಿರ ಡಾಲರ್ (60.7 ಲಕ್ಷ ರೂ) ಸಂಗ್ರಹಿಸಿದೆ. ಈ ಮೊತ್ತವನ್ನು ಅವರು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನೀಡಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಆದರೆ ಸೂಪರ್ ಓವರ್ ಕೂಡ ಟೈನಲ್ಲಿ ಅಂತ್ಯಗೊಂಡಿದ್ದರಿಂದ ಬೌಂಡರಿ ಲೆಕ್ಕಾಚಾರದ ಆಧಾರದ ಮೇಲೆ ಇಂಗ್ಲೆಂಡ್ ತಂಡ ವಿಶ್ವಕಪ್ ಜಯಿಸಿತ್ತು. ಸೂಪರ್ ಓವರ್ನಲ್ಲಿ ಬಟ್ಲರ್ ರನ್ ಔಟ್ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಆ ಪಂದ್ಯದಲ್ಲಿ ಅರ್ಧಶತಕವನ್ನೂ ಅವರು ಗಳಿಸಿದ್ದರು.
ಬಟ್ಲರ್ ಫೈನಲ್ ಪಂದ್ಯದಲ್ಲಿ ಧರಿಸಿದ್ದ ಆ ಜರ್ಸಿ ಇದೀಗ 60.7 ಲಕ್ಷಕ್ಕೆ ಬಿಕರಿಯಾಗಿದೆ. ಈ ಹಣವನ್ನು ಹೃದಯ ಮತ್ತು ಶ್ವಾಸಕೋಶದ ಚಿಕಿತ್ಸೆಗೆ ಹೆಸರಾಗಿರುವ ಲಂಡನ್‌ನ ರಾಯಲ್ ಬ್ರಾಂಪ್ಟನ್ ಮತ್ತು ಹೇರ್‌ಫೀಲ್ಡ್ ಆಸ್ಪತ್ರೆಗೆ ದೇಣಿಗೆ ನೀಡಲು ಕ್ರಿಕೆಟಿಗ ನಿರ್ಧರಿಸಿದ್ದಾರೆ.
'ಈ ವಿಶೇಷ ಶರ್ಟ್ ತುರ್ತು ಪರಿಸ್ಥಿತಿಯ ಕಾರಣಕ್ಕಾಗಿ ಸಹಾಯವಾಗುತ್ತಿರುವುದು ಅರ್ಥಪೂರ್ಣ' ಎಂದು ಬಟ್ಲರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಇಂಗ್ಲೆಂಡ್ ತಂಡದ ಪರ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದೆ 2ನೇ ಫಾಸ್ಟ್ ಬೌಲರ್ ಆಗಿರುವ ಡೇರನ್ ಗಾಫ್ ಕೂಡ ಸಹಿ ಮಾಡಿರುವ ಬಾಲನ್ನು ಕೋವಿಡ್ 19 ಹೋರಾಟಕ್ಕಾಗಿ ಹರಾಜಿಗಿಟ್ಟಿದ್ದರು.
ರವಿ ಬೊಪಾರಾ ತಮ್ಮ ರೆಸ್ಟೋರೆಂಟ್ನಲ್ಲಿ ಎನ್ಹೆಚ್ಎಸ್ ಸಿಬ್ಬಂದಿಗೆ ಉಚಿತ ಚಿಕನ್ ಆಫರ್ ನೀಡಿದ್ದಾರೆ. ರಿಕಿ ಕ್ಲಾರ್ಕ್, ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹೀದರ್ ನೈಟ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಕೂಡ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.