ನವದೆಹಲಿ: ವಿಶ್ವಕಪ್ ಟೂರ್ನಿ ಮುಗಿದ ನಂತರ ವಿರಾಟ್ ಮತ್ತು ರೋಹಿತ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ನಿರ್ವಾಹಕರ ಸಮಿತಿ (ಸಿಒಎ) ಅಧ್ಯಕ್ಷ ವಿನೋದ್ ರೈ ಪ್ರತಿಕ್ರಿಯೆ ನಿಡಿದ್ದಾರೆ.
ಕೊಹ್ಲಿ ಮತ್ತು ರೋಹಿತ್ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿನೋದ್ ರೈ, ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ಗೆ ಕೊಹ್ಲಿ ಮತ್ತು ಚುಟುಕು ಪಂದ್ಯಕ್ಕೆ ರೋಹಿತ್ ಶರ್ಮಾ ಅವರನ್ನ ನಾಯಕನಾಗಿ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆಯಂತೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ರೈ, ಈ ಎಲ್ಲ ಕತೆಗಳನ್ನ ಮಾಧ್ಯಮದವರೇ ಸೃಷ್ಟಿ ಮಾಡಿದ್ದಾರೆ. ಟೀಂ ಇಂಡಿಯಾದ ಇಬ್ಬರು ಟಾಪ್ ಆಟಗಾರ ನಡುವೆ ಯಾವುದೇ ಮುನಿಸಿಲ್ಲ ಎಂದಿದ್ದಾರೆ.
ಹಲವು ದಿನಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ರೋಹಿತ್ ಆಗಲಿ ವಿರಾಟ್ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದು, ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಮಾತಿಗೆ ಇಂಬುಕೊಟ್ಟಿತ್ತು.