ಲೀಡ್ಸ್: ಕ್ರಿಕೆಟ್ ವೃತ್ತಿ ಬದುಕಿನ ಕೊನೆಯ ವಿಶ್ವಕಪ್ ಆಡಿರುವ ವೆಸ್ಟ್ ಇಂಡೀಸ್ನ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ಗೆ ಕೆರಿಬಿಯನ್ ತಂಡ ಕೊನೆಯ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಗೆಲುವಿನ ಉಡುಗೊರೆ ನೀಡಿದೆ.
ವೆಸ್ಟ್ ಇಂಡೀಸ್ ನೀಡಿದ್ದ 312 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತುವಲ್ಲಿ ವಿಫಲಗೊಂಡ ಅಫ್ಘಾನಿಸ್ತಾನ ತಂಡ ಉತ್ತಮ ಜೊತೆಯಾಟದ ನಡುವೆ ಕೂಡ 288 ರನ್ಗಳಿಗೆ ಆಲೌಟ್ ಆಗಿ 23 ರನ್ಗಳ ಸೋಲು ಕಾಣುವಂತಾಯಿತು.
ಟೂರ್ನಿ ಆರಂಭದಲ್ಲೇ ಪಾಕ್ ತಂಡಕ್ಕೆ ಶಾಕ್ ನೀಡಿ, ಗೆಲುವಿನ ಖಾತೆ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡ ನಂತರದ ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ತಂಡ ಇದೀಗ ಗೆಲುವಿನೊಂದಿಗೆ ಮಹಾಟೂರ್ನಿಗೆ ಗ್ರೂಪ್ ಹಂತದಲ್ಲಿಯೇ ವಿದಾಯ ಹೇಳಿದೆ. ಜತೆಗೆ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ಗೆ ಗೆಲುವಿನ ಉಡುಗೊರೆ ನೀಡಿದೆ.
ಇಂಗ್ಲೆಂಡ್ನ ಲೀಡ್ಸ್ ಮೈದಾನದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಗೇಲ್ ಕೇವಲ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಬೌಲಿಂಗ್ನಲ್ಲಿ ಒಂದು ವಿಕೆಟ್ ಹಾಗೂ ಮತ್ತೊಂದು ರನೌಟ್ ಮೂಲಕ ಎದುರಾಳಿ ತಂಡಕ್ಕೆ ಮಾರಕವಾದರು.
ಉಳಿದಂತೆ ವೆಸ್ಟ್ ಇಂಡೀಸ್ನ ಹೋಪ್, ಲೆವಿಸ್, ಪೂರನ್ ಬ್ಯಾಟಿಂಗ್ನಲ್ಲಿ ಮಿಂಚು ಹರಿಸಿದರೆ, ಬ್ರಾತ್ವೈಟ್, ರೂಚ್ ಬೌಲಿಂಗ್ನಲ್ಲಿ ಅಫ್ಘಾನಿಸ್ತಾನ ಬ್ಯಾಟ್ಸ್ಮನ್ಗಳಿಗೆ ಮಾರಕವಾಗಿ ಕಾಡಿದರು. ಇದರ ಫಲವಾಗಿ ತಂಡ ಕೊನೆಯ ಪಂದ್ಯದಲ್ಲಿ ಗೆಲುವು ದಾಖಲು ಮಾಡುವಂತಾಯಿತು.