ಹೈದರಾಬಾದ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗ ಕೆ.ಗೌತಮ್ ಬರೋಬ್ಬರಿ 9.2 ಕೋಟಿ ರೂ.ಗೆ ಸೇಲ್ ಆಗುವುದರ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಇಷ್ಟೊಂದು ಮೊತ್ತಕ್ಕೆ ಸೇಲ್ ಆಗಿರುವ ಅನ್ಕ್ಯಾಪ್ಡ್ ಪ್ಲೇಯರ್ ಕೂಡ ಆಗಿದ್ದಾರೆ.
ತಾವು ಐಪಿಎಲ್ನಲ್ಲಿ ಹರಾಜುಗೊಂಡಿರುವ ವಿಚಾರವಾಗಿ ಮಾತನಾಡಿರುವ ಕೆ. ಗೌತಮ್ ಸಂತಸ ಹೊರಹಾಕಿದ್ದಾರೆ. ಟೀಂ ಇಂಡಿಯಾ ತಂಡಕ್ಕೆ ನೆಟ್ ಬೌಲರ್ ಆಗಿ ಆಯ್ಕೆಯಾಗಿರುವ ಆಲ್ರೌಂಡರ್ ಗೌತಮ್ ಸದ್ಯ ಅಹಮದಾಬಾದ್ನಲ್ಲಿದ್ದು, ಮೊದಲ ಸಲ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಹರಾಜು ಪ್ರಕ್ರಿಯೆ ವೇಳೆ ನಾನು ತುಂಬಾ ನರ್ವಸ್ ಆಗಿದ್ದೆ. ಯಾವ ತಂಡ ನನ್ನನ್ನು ಖರೀದಿ ಮಾಡುತ್ತದೆ ಎಂಬ ಕುತೂಹಲ ಹಾಗೂ ಒತ್ತಡ ಎರಡೂ ಇತ್ತು. ಮೇಲಿಂದ ಮೇಲೆ ಪತ್ನಿಗೆ ಫೋನ್ ಮಾಡಿ ಮಾತನಾಡುತ್ತಿದ್ದೆ. ಆದರೆ, ಕೊನೆಯದಾಗಿ ಸಿಎಸ್ಕೆ ತಂಡ ನನ್ನನ್ನು ಖರೀದಿ ಮಾಡಿದಾಗ ತುಂಬಾ ಸಂತೋಷವಾಯಿತು ಎಂದಿದ್ದಾರೆ.
ಮೂರು ವರ್ಷಗಳ ಕಾಲ ಕರ್ನಾಟಕ ತಂಡದಿಂದ ಹೊರಗುಳಿದಿದ್ದ ಗೌತಮ್
ನಾನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇಲ್ ಆಗುತ್ತಿದ್ದಂತೆ ನನ್ನ ರೂಮ್ಗೆ ಬಂದ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಪಾರ್ಟಿ ಯಾವಾಗ ಎಂದು ಕೇಳಿದ್ರು ಅಂತ ಹೇಳಿರುವ ಗೌತಮ್, ಕುಟುಂಬಸ್ಥರು ಫೋನ್ ಮಾಡಿ ಮಾತನಾಡಿದರು ಎಂದು ಖುಷಿ ಖುಷಿಯಾಗಿ ಹೇಳಿದ್ದಾರೆ. 2012ರಲ್ಲಿ ಕರ್ನಾಟಕ ತಂಡದ ಪರ ರಣಜಿ ಕ್ರಿಕೆಟ್ನಲ್ಲಿ ಡೆಬ್ಯು ಮಾಡಿದ್ದ ಕೆ. ಗೌತಮ್, ಕಳಪೆ ಪ್ರದರ್ಶನದಿಂದಾಗಿ 2014ರಿಂದ 2016 ಅಂದರೆ ಮೂರು ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದರು. ಕಳೆದ ಐಪಿಎಲ್ನಲ್ಲಿ ಪಂಜಾಬ್ ತಂಡದ ಪರ ಕೇವಲ ಎರಡು ಪಂದ್ಯಗಳನ್ನಾಡಿದ್ದರು.
ಯಾವುದೇ ಒತ್ತಡ ಇಲ್ಲ
ಹೆಚ್ಚಿನ ಮೊತ್ತಕ್ಕೆ ಖರೀದಿಯಾಗಿರುವುದು ಯಾವುದೇ ಒತ್ತಡಕ್ಕೊಳಗಾಗುವಂತೆ ಮಾಡಲ್ಲ. ಈಗಾಗಲೇ ನಾನು ಅನೇಕ ದೇಶೀ ಪಂದ್ಯಗಳನ್ನಾಡಿದ್ದೇನೆ. ಮನಸ್ಸಿನಲ್ಲಿ ನಿರಂತರವಾಗಿ ಬೆಲೆ ಟ್ಯಾಗ್ ಬಗ್ಗೆ ಯೋಚನೆ ಮಾಡ್ತಿದ್ದರೆ ನಿಜವಾಗಿ ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಕಳೆದ ವರ್ಷದ ಐಪಿಎಲ್ನಲ್ಲಿ ಅವಕಾಶ ಸಿಗದಿದ್ದಾಗ ಸ್ವಲ್ಪ ಅಸಮಾಧಾನಗೊಂಡಿದ್ದೆ. ಆದರೆ, ಪ್ರಾಂಚೈಸಿ ಹಾಗೂ ತಂಡದ ನಿರ್ವಹಣೆ ತೆಗೆದುಕೊಳ್ಳುವ ನಿರ್ಧಾರ ಗೌರವಿಸಬೇಕು. ಈ ಹಿಂದೆ ಅನಿಲ್ ಕುಂಬ್ಳೆ ಅವರಿಂದ ತುಂಬಾ ವಿಷಯ ಕಲಿತ್ತಿದ್ದೇನೆ. ಹೆಚ್ಚು ಪಂದ್ಯ ಆಡಲಿಲ್ಲ ಎಂಬ ಯೋಚನೆಗಿಂತಲೂ ಮುಂದಿನ ಪಂದ್ಯಗಳ ಬಗ್ಗೆ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಧೋನಿ ಜತೆ ಆಟವಾಡುವುದು ಒಂದು ಆಶೀರ್ವಾದ
ಸಿಎಸ್ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜತೆ ಆಟವಾಡುವುದು ಒಂದು ಆಶೀರ್ವಾದ ಎಂದಿರುವ ಗೌತಮ್,ಅಂತಹ ದಿಗ್ಗಜನೊಂದಿಗೆ ಮೈದಾನ ಹಂಚಿಕೊಳ್ಳಲು ನಿಜಕ್ಕೂ ಹೆಮ್ಮೆ ಇದೆ ಎಂದಿದ್ದಾರೆ.
ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆಯಲ್ಲಿ ಗೌತಮ್ ಖರೀದಿ ಮಾಡಲು ಕೋಲ್ಕತಾ, ಹೈದರಾಬಾದ್ ಮತ್ತು ಚೆನ್ನೈ ಪ್ರಾಂಚೈಸಿ ತೀವ್ರ ಸ್ಪರ್ಧೆಗಳಿಗೆ ಇಳಿದಿದ್ದವು. ಆದರೆ ಕೊನೆಯದಾಗಿ ಸಿಎಸ್ಕೆ ತಂಡ ಅವರನ್ನ ಖರೀದಿ ಮಾಡಿತು. 2018ರ ಸೀಸನ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಗೌತಮ್ 24 ಪಂದ್ಯಗಳಿಂದ 186 ರನ್, 13 ವಿಕೆಟ್ ಪಡೆದುಕೊಂಡಿದ್ದರು.