ಹೈದರಾಬಾದ್: ವೈಯಕ್ತಿಕ ಕಾರಣಗಳಿಂದಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಇದೀಗ ಏಕದಿನ ಸರಣಿಯಿಂದಲೂ ಹೊರಗೆ ಉಳಿಯಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಇಂಗ್ಲೆಂಡ್ ವಿರುದ್ಧದ ಐದು ಟಿ-20 ಪಂದ್ಯಗಳಿಂದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾಗೆ ಈಗಾಗಲೇ ವಿಶ್ರಾಂತಿ ನೀಡಲಾಗಿದೆ. ಸದ್ಯ ಟೆಸ್ಟ್ ಸರಣಿಯಲ್ಲಿ ಅವರು ಭಾಗಿಯಾಗಿದ್ದರು. ಆದರೆ ವೈಯಕ್ತಿಕ ಕಾರಣ ನೀಡಿರುವ ಅವರು, ಗುರುವಾರದಿಂದ ಆರಂಭಗೊಳ್ಳಲಿರುವ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯುತ್ತಿರುವುದಾಗಿ ಬಿಸಿಸಿಐಗೆ ಪತ್ರ ಬರೆದಿದ್ದರು. ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಅವರಿಗೆ ಅನುಮತಿ ನೀಡಿದೆ. ಈ ಬೆನ್ನಲ್ಲೇ ಏಕದಿನ ಸರಣಿಯಲ್ಲೂ ಪಾಲ್ಗೊಳ್ಳದೆ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಕೋವಿಡ್ -19 ಲಸಿಕೆ ಪಡೆದ ರವಿಶಾಸ್ತ್ರಿ: ವೈದ್ಯಕೀಯ ಸಿಬ್ಬಂದಿ ಸೇವೆ ಹೊಗಳಿದ ಕೋಚ್
ಮಾರ್ಚ್ 12ರಿಂದ ಭಾರತ-ಇಂಗ್ಲೆಂಡ್ ನಡುವೆ ಐದು ಟಿ-20 ಪಂದ್ಯಗಳ ಸರಣಿ ಶುರುವಾಗಲಿದೆ. ಇದಾದ ನಂತರ ಮಾರ್ಚ್ 23ರಿಂದ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಏಪ್ರಿಲ್-ಮೇ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದ್ದು, ಬುಮ್ರಾ ನೇರವಾಗಿ ಅದರಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಬುಮ್ರಾ ಇಲ್ಲಿಯವರೆಗೆ 67 ಏಕದಿನ ಪಂದ್ಯಗಳಿಂದ 108 ವಿಕೆಟ್ ಪಡೆದುಕೊಂಡಿದ್ದು, ವಿಶ್ವಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ.