ಢಾಕಾ: ಇದೇ ಭಾನುವಾರ ನಡೆಯಲಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ನಟಿ ಕತ್ರೀನಾ ಕೈಫ್ ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಪಿಎಲ್ ಹಂಗಾಮಿ ಅಧ್ಯಕ್ಷ ಶೇಕ್ ಸೊಹೆಲ್, ಭಾನುವಾರ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್ಗಳು ಉದ್ಘಾಟನಾ ಸಾಮಾರಂಭಕ್ಕೆ ಮೆರುಗು ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಆವೃತ್ತಿಗಿಂತ ಅದ್ಧೂರಿಯಾದ ಕಾರ್ಯಕ್ರಮ ನಡೆಸಲು ಬಿಪಿಎಲ್ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಈ ಮೊದಲು ಡಿ.3ಕ್ಕೆ ಉದ್ಘಾಟನಾ ಸಮಾರಂಭವನ್ನು ನಿಗದಿ ಮಾಡಲಾಗಿತ್ತು. ಆದರೆ ಕೆಲ ಕಾರಣಗಳಿಂದ ಭಾನುವಾರಕ್ಕೆ ಮುಂದೂಡಲಾಗಿದೆ.
ಡಿ.11 ರಿಂದ ಆರಂಭವಾಗುವ ಬಿಪಿಎಲ್ ಟೂರ್ನಿ, ಜನವರಿ 17ಕ್ಕೆ ಮುಕ್ತಾಯಗೊಳ್ಳಲಿದೆ. ಟೂರ್ನಿಯಲ್ಲಿ ಒಟ್ಟು 7 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಬಾಂಗ್ಲಾದೇಶದ ರಾಷ್ಟ್ರಪಿತ ಎಂದು ಕರೆಯಲ್ಪಡುವ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮ ದಿನಾಚರಣೆಯನ್ನು ಅಂಗವಾಗಿ ಈ ಟೂರ್ನಿಯನ್ನು ಆಯೋಜಿಸಲಾಗಿದೆ.