ಅಡಿಲೇಡ್: ಮೆಲ್ಬೋರ್ನ್ನಲ್ಲಿ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಭಾರತದ ವಿರುದ್ಧದ ಸರಣಿಯನ್ನು ನಿರ್ಧರಿಸಲಿದೆ ಎಂದು ಆಸೀಸ್ ಆರಂಭಿಕ ಆಟಗಾರ ಜೋ ಬರ್ನ್ಸ್ ಹೇಳಿದ್ದಾರೆ.
ಬ್ಯಾಟಿಂಗ್ ವೈಫಲ್ಯದಿಂದಾಗಿ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದ್ದು 0-1ರ ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದು, ಸರಣಿಯ ಉಳಿದ ಪಂದ್ಯಗಳಲ್ಲಿ ಭಾರತವನ್ನು ಅಜಿಂಕ್ಯಾ ರಹಾನೆ ಮುನ್ನಡೆಸಲಿದ್ದಾರೆ.
"ಸರಣಿಯಲ್ಲಿ ನಾವು ಕೊಂಚ ಮೇಲುಗೈ ಹೊಂದಿದ್ದು, ಮುಂದಿನ ಪಂದ್ಯಕ್ಕಾಗಿ ಚೆನ್ನಾಗಿ ತಯಾರಾಗಬೇಕಿದೆ. ಉತ್ತಮ ಆರಂಭ ಪಡೆಯುವ ಮೂಲಕ ಹಿಂದಿನ ಪಂದ್ಯದ ಆವೇಗವನ್ನು ಮುಂದುವರೆಸಬೇಕಿದೆ" ಎಂದು ಬರ್ನ್ಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
"ಶಮಿ ಮತ್ತು ವಿರಾಟ್ ಅನುಪಸ್ಥಿತಿ ಭಾರತಕ್ಕೆ ದೊಡ್ಡ ನಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೂ ಕೂಡ ಭಾರತೀಯ ತಂಡವು ಉತ್ತಮ ತಂಡವಾಗಿದ್ದು, ಸವಾಲಾಗಿಯೇ ಕಾಣುತ್ತಾರೆ" ಎಂದು ಬರ್ನ್ಸ್ ಹೇಳಿದ್ದಾರೆ.
"ವಿಶ್ವ ದರ್ಜೆಯ ಆಟಗಾರರ ಸ್ಥಾನ ತುಂಬುವುದು ತುಂಬಾ ಕಷ್ಟದ ಕೆಲಸ. ನಾವು ಮುಂದಿನ ಪಂದ್ಯಕ್ಕೆ ಉತ್ತಮವಾಗಿ ತಯಾರಿ ನಡೆಸಲಿದ್ದೇವೆ. ಭಾರತೀಯರು ಮತ್ತೆ ಪುಟಿದೇಳಲಿದ್ದಾರೆ ಎಂದು ನಮಗೆ ಬಲವಾಗಿ ತಿಳಿದಿದೆ ಎಂದಿದ್ದಾರೆ.