ನವದೆಹಲಿ: ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ 2016ರ ಐಪಿಎಲ್ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಚಾಂಪಿಯನ್ ಆದ ಕ್ಷಣವನ್ನು ತಮ್ಮ ಎಂದೂ ಮರೆಯದ ನೆಚ್ಚಿನ ಐಪಿಎಲ್ ಕ್ಷಣಗಳಲ್ಲೊಂದು ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ #AskBhuvi ಎಂಬ ಹ್ಯಾಷ್ಟ್ಯಾಗ್ನೊಡನೆ ಅಭಿಮಾನಿಗಳ ಜೊತೆ ನಡೆಸಿದ ಪ್ರಶ್ನೋತ್ತರ ಸಂವಾದದ ವೇಳೆ ಸ್ವಿಂಗ್ ಸ್ಪೆಷಲಿಸ್ಟ್ ಕೆಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ನಿಮ್ಮ ನೆಚ್ಚಿನ ಐಪಿಎಲ್ ಕ್ಷಣ ಯಾವುದು ಎಂದು ಕೇಳಿದ್ದಕ್ಕೆ ಭುವಿ 2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದ್ದು ಎಂದು ಉತ್ತರಿಸಿದ್ದಾರೆ.
2016 ಮೇ 29ರಂದು ನಡೆದಿದ್ದ ಐಪಿಎಲ್ ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಕೊಹ್ಲಿ ನೇತೃತ್ವದ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಆ ಪಂದ್ಯದಲ್ಲಿ ವಿಕೆಟ್ ಪಡೆಯದಿದ್ದರೂ ಕೊಹ್ಲಿ, ಗೇಲ್, ರಾಹುಲ್, ಎಬಿಡಿ, ವಾಟ್ಸನ್‌ರಂತಹ ಘಟಾನುಘಟಿಗಳ ಎದುರು ತಮ್ಮ 4 ಓವರ್ಗಳಲ್ಲಿ ಕೇವಲ 25 ರನ್ ಬಿಟ್ಟುಕೊಟ್ಟಿದ್ದರು.
ಹಾಗೆಯೇ ಮುಂದುವರಿಯುತ್ತಾ ತಮ್ಮ ನೆಚ್ಚಿನ ಫುಡ್ ಕದಿ ಚಾವಲ್ ಎಂತಲೂ, ಕ್ರಿಕೆಟ್ ಹೊರೆತುಪಡಿಸಿದ ನೆಚ್ಚಿನ ಆಟ ಯಾವುದು ಎಂಬ ಪ್ರಶ್ನೆಗೆ ಫುಟ್ಬಾಲ್ ಮತ್ತು ಬ್ಯಾಡ್ಮಿಂಟನ್ ಎಂದು ಉತ್ತರಿಸಿದ್ದಾರೆ. ಫುಟ್ಬಾಲ್ನಲ್ಲಿ ಲಿಯೋನೆಲ್ ಮೆಸ್ಸಿ ಅಥವಾ ಕ್ರಿಶ್ವಿಯಾನೋ ರೊನಾಲ್ಡೋರಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಎಂಬ ಪ್ರಶ್ನೆಗೆ ಭುವಿ ಮೆಸ್ಸಿಯನ್ನು ಹೆಸರಿಸಿದ್ದಾರೆ.
ಪ್ರಸ್ತುತ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಎ ಕೆಟಗರಿಯಲ್ಲಿರುವ ಭುವಿ 2019ರ ಅಕ್ಟೋಬರ್ನಿಂದ 2020ರ ಸೆಪ್ಟೆಂಬರ್ ಅವಧಿಗೆ 5 ಕೋಟಿ ರೂ. ಪಡೆಯಲಿದ್ದಾರೆ. ಐಪಿಎಲ್ನಲ್ಲಿ 8.5 ಕೋಟಿ ಪಡೆಯುತ್ತಿದ್ದಾರೆ. ಆದರೆ, ಪ್ರಶ್ನೋತ್ತರ ವೇಳೆ ಅಭಿಮಾನಿ ನಿಮ್ಮ ಮೊದಲ ಬಾರಿ ಪಡೆದ ವೇತನದ ಚೆಕ್ ಎಷ್ಟು ಎಂದಿದ್ದಕ್ಕೆ ₹3000 ಎಂದು ಉತ್ತರಿಸಿದ್ದಾರೆ.