ದುಬೈ : ರಾಜಸ್ಥಾನ್ ರಾಯಲ್ಸ್ ತಂಡ ಇಂಗ್ಲೆಂಡ್ ಆಲ್ರೌಂಡರ್ ಬೆನ್ಸ್ಟೋಕ್ಸ್ ಅವರ ಸೇವೆಯನ್ನು ಮೊದಲಾರ್ಧದ ಐಪಿಎಲ್ನಲ್ಲಿ ಕಳೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ. 13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ರಾಜಸ್ಥಾನ್ ರಾಯಲ್ಸ್ ಸೆಪ್ಟೆಂಬರ್ 22ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನಾಡಲಿದೆ.
ಪ್ರಸ್ತುತ ಇಂಗ್ಲೆಂಡ್ ತಂಡದಿಂದ ಬ್ರೇಕ್ ತೆಗೆದುಕೊಂಡಿರುವ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸದ್ಯ ನ್ಯೂಜಿಲ್ಯಾಂಡ್ನಲ್ಲಿದ್ದು, ಬ್ರೈನ್ ಕ್ಯಾನ್ಸರ್ನಿಂದ ಬಳಲುತ್ತಿರುವ ತಮ್ಮ ತಂದೆಯ ಜತೆ ಕೆಲ ಸಮಯ ಕಳೆಯಲು ಬಯಸಿರುವುದರಿಂದ ಐಪಿಎಲ್‌ನ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ನ್ಯೂಜಿಲ್ಯಾಂಡ್ ಕೋವಿಡ್-19 ನಿಯಮಗಳ ಪ್ರಕಾರ ಬೆನ್ ಸ್ಟೋಕ್ಸ್ ಈಗಷ್ಟೇ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಪ್ರಸ್ತುತ ಅವರ ತಂದೆಯನ್ನು ಭೇಟಿ ಮಾಡಿದ್ದಾರೆ. ಖಂಡಿತವಾಗಿಯೂ ಕೆಲ ಅಮೂಲ್ಯ ಸಮಯವನ್ನು ಅವರ ತಂದೆಯೊಂದಿಗೆ ಕಳೆಯಬೇಕಾಗಿದೆ ಎಂದು ಆರ್ಆರ್ ಪ್ರಾಂಚೈಸಿ ಮೂಲ ಪಿಟಿಐಗೆ ತಿಳಿಸಿದೆ.
ಈಗಷ್ಟೇ ಕ್ವಾರಂಟೈನ್ ಮುಗಿಸಿರುವುದರಿಂದ ಅವರು ಐಪಿಎಲ್‌ನ ಟೂರ್ನಿಯ ಮೊದಲಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂಬುದು ವಾಸ್ತವ. ಅದು ಅರ್ಥ ಮಾಡಿಕೊಳ್ಳಬಹುದಾದ ವಿಷಯ. ಇಂತಹ ಸಂದರ್ಭದಲ್ಲಿ ಪ್ರಾಂಚೈಸಿ ಅವರಿಗೆ ಕರೆ ಮಾಡಲು ಬಯಸುವುದಿಲ್ಲ. ಅವರು ಅಮೂಲ್ಯ ಸಮಯವನ್ನು ಅವರ ಕುಟುಂಬದ ಜೊತೆ ಕಳೆಯಲು ಬಿಡಬೇಕಾಗಿದೆ. ಯಾವುದೇ ಚರ್ಚೆಯನ್ನು ನಂತರ ಮಾಡಬಹುದು ಎಂದು ಆ ಸುದ್ದಿ ಮೂಲ ತಿಳಿಸಿದೆ.
ರಾಜಸ್ಥಾನ್ ರಾಯಲ್ಸ್ ಬೆನ್ ಸ್ಟೋಕ್ಸ್ ಜೊತೆ ಚರ್ಚಿಸಿ ನಂತರ ಮುಂದಿನ ಹಂತಕ್ಕೆ ತೆರಳಲಿದೆ. ಇಂಗ್ಲಿಷ್ ಆಲ್ರೌಂಡರ್ ತಮ್ಮ ಲಭ್ಯತೆಯ ಬಗ್ಗೆ ಖಚಿತಪಡಿಸಿದ ನಂತರವಷ್ಟೇ ಈ ವಿಚಾರದ ಬಗ್ಗೆ ಫ್ರಾಂಚೈಸಿ ಮುಂದುವರಿಯಲಿದೆ. ಅದಾಗ್ಯೂ, ರಾಜಸ್ಥಾನ್ ತಂಡ ಯುಎಇನಲ್ಲಿ ಸ್ಟೋಕ್ಸ್ರನ್ನು ಕಾಣಲು ಇಷ್ಟಪಡುತ್ತದೆ ಎಂದಿದ್ದಾರೆ.
ನಿಷೇಧದಿಂದ ರಾಜಸ್ಥಾನ್ ಐಪಿಎಲ್ಗೆ ಮರಳಿದಾಗಿನಿಂದಲೂ ಬೆನ್ ಸ್ಟೋಕ್ಸ್ ಆ ತಂಡದ ಪರ ಆಡುತ್ತಿದ್ದಾರೆ. ಅದಕ್ಕೂ ಮೊದಲು ಅವರು ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡದ ಪರ 2016 ಮತ್ತು 2017ರಲ್ಲಿ ಆಡಿದ್ದರು. 2018ರಲ್ಲಿ ರಾಯಲ್ಸ್ ಪರ 14 ವಿಕೆಟ್ಸ್ ಮತ್ತು 319 ರನ್ಗಳಿಸಿದ್ದರು.