ಮೈಸೂರು: ಕ್ಯಾಪ್ಟನ್ ಸಿ.ಎಂ ಗೌತಮ್ 96 ರನ್‍ಗಳ ಅಬ್ಬರದ ಆಟದಿಂದ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 37 ರನ್ ಗಳಿಂದ ಗೆಲುವು ಸಾಧಿಸಿದ ಬಳ್ಳಾರಿ ಟಸ್ಕರ್ಸ್ ಫೈನಲ್‍ಗೆ ಲಗ್ಗೆ ಇಟ್ಟಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಬಳ್ಳಾರಿ ಟಸ್ಕರ್ಸ್ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕವಾಗಿ ಕ್ರಿಸ್ ಗಿಳಿದ ಅಭಿಷೇಕ್ ರೆಡ್ಡಿ ಹಾಗೂ ಕ್ಯಾಪ್ಟನ್ ಸಿ.ಎಂ ಗೌತಮ್ ಆರಂಭಿಕವಾಗಿ ರನ್‍ಗಳ ವೇಗ ಹೆಚ್ಚಿಸಲು ಬಿರುಸಿನ ಆಟ ಶುರು ಮಾಡಿದರು.
ಅಭಿಷೇಕ್ ರೆಡ್ಡಿ 16 ರನ್ಗಳಿಸಿ ಔಟ್ ಆದರೆ, ಬೌಲರ್‍ಗಳನ್ನು ದಂಡಿಸಿದ ಸಿ.ಎಂ ಗೌತಮ್ 9 ಬೌಂಡರಿ, 5 ಸಿಕ್ಸರ್ ನೆರವಿನಿಂದ 96 ರನ್ ಗಳಿಸಿ ಪೆವಿಲಿಯನ್ನತ ಹೆಜ್ಜೆ ಹಾಕಿದರು. ನಂತರ ಬ್ಯಾಟ್ಸ್ ಮನ್‍ಗಳು ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲದೇ ಪೆವಿಲಿಯನ್ ಕಡೆ ಮುಖ ಮಾಡಿದರು. 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ ಬಳ್ಳಾರಿ ಟಸ್ಕರ್ಸ್ 201 ರನ್ ಪೇರಿಸಿತು.
ಈ ಸವಾಲಿನ ಮೊತ್ತವನ್ನ ಬೆನ್ನತಿದ್ದ ಬೆಳಗಾವಿ ಪ್ಯಾಂಥರ್ಸ್ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ, ಬಳ್ಳಾರಿ ಟಸ್ಕರ್ಸ್ ಎದುರು 37 ರನ್‍ಗಳಿಂದ ಸೋಲನ್ನಪ್ಪಿಕೊಂಡಿತು. ಅಭಿನವ್ ಮನೋಹರ್ ಔಟಾಗದೇ 62 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ತೆಗೆದುಕೊಂಡು ಹೋಗಲು ಮಾಡಿದ ಪ್ರಯತ್ನ ವ್ಯರ್ಥವಾಯಿತು.
ಸ್ಟಾಲಿನ್ ಹೂವರ್(39), ಅವಿನಾಶ್(ಔಟಾಗದೇ 31) ಸಮಯೋಜಿತ ಆಟವಾಡಿದರು. ಇನ್ನುಳಿದ ಬ್ಯಾಟ್ಸ್ ಮನ್‍ಗಳು ಎರಡಂಕಿ ದಾಟಲಿಲ್ಲ.