ನವದೆಹಲಿ: ವಿಶ್ವ ಕ್ರಿಕೆಟ್ನಲ್ಲಿ ಈಗಾಗಲೇ ಫ್ಯಾಬ್ 4(ಶ್ರೇಷ್ಠ 4 ಆಟಗಾರರು) ಪಟ್ಟಿಯನ್ನು ಬಾಬರ್ ಅಜಮ್ ಬದಲಾಯಿಸಿದ್ದಾರೆ. ತಮ್ಮ ಪ್ರದರ್ಶನದ ಮೂಲಕ ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳಲ್ಲಿ ಈ ಯುಗದಲ್ಲಿರುವುದು ಫ್ಯಾಬ್ 4 ಅಲ್ಲ, ಫ್ಯಾಬ್ 5 ಎಂದು ತಾವು ಶ್ರೇಷ್ಠ ಆಟಗಾರರ ಲಿಸ್ಟ್ಗೆ ಸೇರುವಂತೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ, ಇಂಗ್ಲೆಂಡ್ನ ಜೋ ರೂಡ್, ಕಿವೀಸ್ನ ಕೇನ್ ವಿಲಿಯಮ್ಸನ್ ಹಾಗೂ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ರನ್ನು ಪ್ರಸ್ತುತ ಕ್ರಿಕೆಟ್ನ ಶ್ರೇಷ್ಠ ಆಟಗಾರರು ಅಂದರೆ ಫ್ಯಾಬ್ 4 ಎಂದು ಕರೆಯಲಾಗುತ್ತಿದೆ. ಆದರೆ ಕಳೆದ 3 ವರ್ಷಗಳಿಂದ ಪಾಕಿಸ್ತಾನದ ಯುವ ಬ್ಯಾಟ್ಸ್ಮನ್ ಬಾಬರ್ ಅಜಮ್ ಕ್ರಿಕೆಟ್ನಲ್ಲಿ ತಮ್ಮದೇ ಆದ ಹೆಸರು ಗಳಿಸಿದ್ದಾರೆ. ಮೂರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟಾಪ್ 5 ತಲುಪಿದ್ದಾರೆ. ಇಷ್ಟು ದಿನ ಕೊಹ್ಲಿಯೊಂದಿಗೆ ಹೋಲಿಕೆ ಬೇಡ ಎನ್ನತ್ತಿದ್ದ ಬಾಬರ್ ಇದೀಗ ಶ್ರೇಷ್ಠ ಆಟಗಾರರೊಂದಿಗೆ ಹೋಲಿಕೆ ನನಗೆ ಸವಾಲನ್ನು ಸ್ವೀಕರಿಸಲು ನೆರವಾಗಿದೆ ಎಂದಿದ್ದಾರೆ.
ನೀವು ಕೆಲವು ಶ್ರೇಷ್ಠ ಆಟಗಾರರೊಂದಿಗೆ ಹೋಲಿಕೆ ಮಾಡಿದಾಗ ಉಂಟಾಗುವ ಭಾವನೆ ಉತ್ತಮವಾಗಿರುತ್ತದೆ ನನಗೆ ತಿಳಿದಿದೆ. ನನ್ನ ಮನಸ್ಥಿತಿಯೆಂದರೆ ನನಗೆ ನಾನೇ ಸವಾಲನ್ನು ಪಡೆದುಕೊಳ್ಳುತ್ತೇನೆ. ನಾನು ಗುರಿಗಳನ್ನು ಹೊಂದಿದ್ದೇನೆ. ಆದರೆ ಅಂತಿಮವಾಗಿ ಪಾಕಿಸ್ತಾನಕ್ಕೆ ಗೆಲುವು ತಂದುಕೊಡುವುದೇ ನನ್ನ ಧ್ಯೇಯವಾಗಿರುತ್ತದೆ. ಇದನ್ನು ನಾನು ತುಂಬಾ ಪ್ರೀತಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ದೊಡ್ಡ ಆಟಗಾರರೊಂದಿಗೆ ಹೋಲಿಸುವುದರಿಂದ ನಿಮ್ಮ ಗುರಿಯನ್ನು ತಲುಪಲು ನೆರವಾಗುತ್ತದೆ. ನಿಮ್ಮ ಹೆಸರು ವಿಶ್ವದ ಶ್ರೇಷ್ಠ 5 ಆಟಗಾರರ ಪಟ್ಟಿಯಲ್ಲಿದ್ದರೆ ಅದೊಂದು ಅದ್ಭುತ ಅನುಭವ. ಇದು ನಿಮ್ಮಲ್ಲಿರುವ ವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ನಿಮ್ಮ ಉತ್ತಮ ಪ್ರದರ್ಶನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದು 26 ವರ್ಷದ ಆಟಗಾರ ಅಜಮ್ ಹೇಳಿದ್ದಾರೆ.
ನಾನು ನನ್ನ ಪ್ರದರ್ಶನದಿಂದ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದೇನೆ. ಭಾರತದಲ್ಲೂ ನನಗೆ ಸ್ನೇಹಿತರಿದ್ದಾರೆ. ನನಗೆ ಭಾರತದಲ್ಲಿ ಅಭಿಮಾನಿಗಳೂ ಇದ್ದಾರೆ. ನನಗೆ ಹೀಗೆಯೇ ಬೆಂಬಲ ನೀಡುತ್ತಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಬಾಬರ್ ಹೇಳಿದ್ದಾರೆ.
ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಬಾಬರ್ ಅಜಮ್ರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೂರು ಮಾದರಿಯ ತಂಡಕ್ಕೂ ನಾಯಕನನ್ನಾಗಿ ನೇಮಕ ಮಾಡಿದೆ.