ಮುಂಬೈ: ಭಾರತೀಯ ಕ್ರಿಕೆಟ್ನ ಆಲ್ರೌಂಡರ್ ರವೀಂದ್ರ ಜಡೇಜಾಗೆ ಸೌರಾಷ್ಟ್ರ ತಂಡದ ಪರ ಫೈನಲ್ ಆಡಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಗುಜರಾತ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಸೌರಾಷ್ಟ್ರ ಇದೀಗ ಫೈನಲ್ ಪಂದ್ಯದಲ್ಲಿ ಬಂಗಾಳ ಸವಾಲು ಎದುರಿಸಲಿದೆ. ತಂಡದಲ್ಲಿ ಕ್ರಿಕೆಟ್ ಆಡಲು ರವೀಂದ್ರ ಜಡೇಜಾಗೆ ಅವಕಾಶ ನೀಡಬೇಕು ಎಂದು ಸೌರಾಷ್ಟ್ರ ಕ್ರಿಕೆಟ್ ಮಂಡಳಿ ಬಿಸಿಸಿಐ ಅಧ್ಯಕ್ಷರ ಬಳಿ ಮನವಿ ಮಾಡಿಕೊಡಿತ್ತು. ಆದರೆ, ಅವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಗಂಗೂಲಿ ಹೇಳಿದ್ದು, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗುವ ಸುಳಿವು ನೀಡಿದ್ದಾರೆ.
ಮಾರ್ಚ್ 12ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ಅದರಲ್ಲಿ ಜಡೇಜಾ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ರಣಜಿಯಲ್ಲಿ ಆಡಲು ಅವರಿಗೆ ಅವಕಾಶ ನೀಡಲ್ಲ ಎಂಬ ಮಾತು ಕೇಳಿ ಬರುತ್ತಿವೆ.
ಇದರ ಮಧ್ಯೆ ಚೇತೇಶ್ವರ್ ಪೂಜಾರಾ ಸೌರಾಷ್ಟ್ರ ತಂಡದ ಪರ ಕಣಕ್ಕಿಳಿಯಲಿದ್ದು, ವೃದ್ಧಿಮಾನ್ ಸಾಹಾ ಬಂಗಾಳ್ ತಂಡದಲ್ಲಿ ಆಡಲಿದ್ದಾರೆ. ಆದರೆ, ಜಡೇಜಾಗೆ ಆಡಲು ಬಿಸಿಸಿಐ ಅನುಮತಿ ನೀಡಿಲ್ಲ.