ಮುಂಬೈ: ಕಳೆದ 10 ವರ್ಷಗಳಿಂದ ಬಿಸಿಸಿಐನಲ್ಲಿ ಹಲವು ಜವಾಬ್ದಾರಿ ನಿರ್ವಹಿಸುತ್ತಿದ್ದ ಜಿಎಂ ಕೆವಿಪಿ ರಾವ್ ಅವರನ್ನು ಹುದ್ದೆಯಿಂದ ಹೊರ ಹೋಗುವಂತೆ ಬಿಸಿಸಿಐ ಕೇಳಿಕೊಂಡಿದೆ ಎಂದು ರಾವ್ ತಿಳಿಸಿದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಂಟಲ್ ಮ್ಯಾನ್ ಗೇಮ್ಗೆ ಕೊಡುಗೆ ನೀಡಲು ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ ತಿಳಿಸಿದ್ದಾರೆ.
ಈ ಉದ್ಯೋಗದಿಂದ ಮುಕ್ತಾಯ ಹೊಂದುತ್ತಿರುವುದರಿಂದ ತಮ್ಮ ವೃತ್ತಿಪರ ಕೌಶಲ್ಯಗಳನ್ನು ಬೇರೆಡೆ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಒದಗಿಸಿದೆ. ಹಾಗಾಗಿ ಈ ದಿನ ನನ್ನ ಜೀವನದ ಅತ್ಯತ್ತಮ ದಿನ ವಿವಿಧ ರಾಜ್ಯ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ರಾವ್ ತಿಳಿಸಿದ್ದಾರೆ.
" ಬಿಸಿಸಿಐ ಡಿಸೆಂಬರ್ 22, 2020ರಂದು ನನ್ನ ಉದ್ಯೋಗವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಈ ಅಂತ್ಯ ನನಗೆ ಬೇರೆಕಡೆ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶನ್ನು ಮಾಡಿಕೊಡಲಿದೆ ಎಂದು ಭಾವಿಸಿದ್ದೇನೆ. ಇದು ನನ್ನ ಜೀವನದ ಅತ್ಯುತ್ತಮ ದಿನ" ಎಂದು ಅವರು ಬರೆದು ಕೊಂಡಿದ್ದಾರೆ.
ರಾವ್ ಭಾರತದಲ್ಲಿ 2013ರ ಮಹಿಳಾ ವಿಶ್ವಕಪ್ ಮತ್ತು 2016ರ ಪುರುಷರ ಟಿ-20 ವಿಶ್ವಕಪ್ ಆಯೋಜನೆಯಲ್ಲಿ ಬಿಸಿಸಿಐನ ಟೂರ್ನಮೆಂಟ್ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಕಳೆದ 10 ವರ್ಷಗಳಿಂದ ಸುಮಾರು 2000ಕ್ಕೂ ಹೆಚ್ಚು ದೇಶಿ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ತಮ್ಮ ಈ ಕಾರ್ಯ ಯಶಸ್ವಿಯಾಗಲು ನೆರವಾದ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಅವರು ಧನ್ಯವಾದ ತಿಳಿಸಿದ್ದಾರೆ.