ಅಹಮದಾಬಾದ್: ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 8 ತಂಡಗಳು ಸ್ಪರ್ಧಿಸುತ್ತಿವೆ. ಕಳೆದ ಎರಡು ತಿಂಗಳಿನಿಂದ ಮತ್ತೆರಡು ತಂಡಗಳನ್ನು ಶ್ರೀಮಂತ ಲೀಗ್ಗೆ ಸೇರಿಸಲಾಗುತ್ತದೆ ಎಂಬ ಕೂಗು ಕೇಳಿ ಬರುತ್ತಿತ್ತು. ಆದರೆ, 2022ಕ್ಕೆ ಎರಡು ಹೊಸ ತಂಡಗಳ ಸೇರ್ಪಡೆ ಮಾಡುಲಾಗುವುದು ಎಂದು ಗುರುವಾರ ಅಹ್ಮದಾಬಾದ್ನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಬಿಸಿಸಿಐನ 89ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಾಜೀವ್ ಶುಕ್ಲಾ ಅಧಿಕೃತವಾಗಿ ಬಿಸಿಸಿಐನ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ನಂತರ ಐಪಿಎಲ್ನಲ್ಲಿ 2 ತಂಡಗಳನ್ನು ಸೇರಿಸುವ ವಿಚಾರ ಹಾಗೂ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಸೇರ್ಪಡೆಗೊಳಿಸುವ ವಿಚಾರವನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರೊಬ್ಬರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಬಿಸಿಸಿಐ 2021ರ ಟಿ-20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಆಯೋಜನೆ ಮಾಡಲಿದೆ. ಹಾಗಾಗಿ ಸರ್ಕಾರದೊಂದಿಗೆ ತೆರಿಗೆ ವಿನಾಯಿತಿ ಪಡೆಯಲು ನಮ್ಮ ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಮಾತನಾಡಲಿದ್ದಾರೆ. ಒಂದು ವೇಳೆ, ಸರ್ಕಾರ ಒಪ್ಪದಿದ್ದರೆ ನಾವು ಇದನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ನಂತರ ನಿರ್ಧರಿಸಲಿದ್ದೇವೆ. ಜೊತೆಗೆ 2016ರ ಟಿ-20 ವಿಶ್ವಕಪ್ನ ವಿಷಯ ಕೂಡ ಬಾಕಿ ಉಳಿದಿದ್ದು, ಅದನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಟಿ-20 ಕ್ರಿಕೆಟ್ ಸೇರ್ಪಡೆಗೊಳಿಸುವ ವಿಚಾರದಲ್ಲಿ ಬಿಸಿಸಿಐಗೆ ಸಮ್ಮತಿಯಿದೆ, ಈ ಕುರಿತು ಇಂಡಿಯನ್ ಒಲಿಂಪಿಕ್ಸ್ ಸಮಿತಿಯೊಂದಿಗೆ ಚರ್ಚೆ ನಡೆಸಲಾಗುವುದು. ಇದರಲ್ಲಿ ಆದಾಯವನ್ನು ಹೇಗೆ ಶೇರ್ ಮಾಡಿಕೊಳ್ಳುವುದು ಹಾಗೂ ಇತರ ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಇನ್ನು, ಎಲ್ಲ ಪ್ರಥಮ ದರ್ಜೆ ಕ್ರಿಕೆಟ್ ಆಟಗಾರರಿಗೆ (ಮಹಿಳೆಯರಿಗೆ ಮತ್ತು ಪುರುಷರಿಗೆ) ಕೋವಿಡ್ ಕಾರಣದಿಂದ ಮೊಟಕುಗೊಳಿಸಿದ ಪಂದ್ಯಾಟದ ಕುರಿತಾದಂತೆ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.