ದುಬೈ: ವಿಶ್ವದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಜುಲೈನಲ್ಲಿ ಕೈಗೊಳ್ಳಬೇಕಾಗಿದ್ದ ಶ್ರೀಲಂಕಾ ಪ್ರವಾಸವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೂರು ತಿಂಗಳ ಕಾಲ ಮುಂದೂಡಿದೆ.
ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಬಾಂಗ್ಲಾ ಆಡಬೇಕಾಗಿತ್ತು. ಆದರೆ, ಕೊರೊನಾ ಅಟ್ಟಹಾಸ ನಿಂತಿಲ್ಲ. ಮುಂಜಾಗ್ರತಾ ಕ್ರಮವಾಗಿ ಸರಣಿಯನ್ನು ಮುಂದೂಡಲಾಗುತ್ತಿದೆ ಎಂದು ಐಸಿಸಿ ತನ್ನ ಟ್ವಿಟರ್ನಲ್ಲಿ ತಿಳಿಸಿದೆ.
ಕೋವಿಡ್–19 ಸೃಷ್ಟಿಸಿರುವ ಬಿಕ್ಕಟ್ಟಿನ ಪರಿಣಾಮ ಆಟಗಾರರು ಸರಣಿಗೆ ಸಜ್ಜುಗೊಂಡಿಲ್ಲ. ಅಭ್ಯಾಸದಲ್ಲಿ ತೊಡಗಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಹೇಳಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ತಿಳಿಸಿದೆ. ಪರಸ್ಪರ ಚರ್ಚೆ ನಡೆಸಿ ಸರಣಿ ಯಾವಾಗ ನಡೆಸಬೇಕು ಎಂಬುದರ ಕುರಿತು ಸ್ಪಷ್ಟಪಡಿಸುತ್ತೇವೆ ಎಂದು ಎರಡೂ ಆಡಳಿತ ಮಂಡಳಿಗಳು ಐಸಿಸಿಗೆ ತಿಳಿಸಿವೆ.
ಈ ಹಿಂದೆ ದಕ್ಷಿಣ ಏಷ್ಯಾದ ಮೂವರು ಕ್ರಿಕೆಟಿಗರಿಗೆ ವೈರಸ್ ತಗುಲಿದ್ದ ಕಾರಣ ನ್ಯೂಜಿಲ್ಯಾಂಡ್ ಬಾಂಗ್ಲಾದೇಶದ ಟೆಸ್ಟ್ ಪ್ರವಾಸವನ್ನು ಮುಂದೂಡಲಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ನಿಮಿತ್ತ ಈ ಸರಣಿ ಆಗಸ್ಟ್ - ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ನ್ಯೂಜಿಲ್ಯಾಂಡ್ ಎರಡು ಟೆಸ್ಟ್ ಸರಣಿಯನ್ನು ಆಡಲಿದೆ.
ಕಳೆದ ವಾರ ಬಾಂಗ್ಲಾದೇಶದ ಮಾಜಿ ಏಕದಿನ ನಾಯಕ ಮಶ್ರಫ್ ಮೊರ್ತಾಜಾ, ನಜ್ಮುಲ್ ಇಸ್ಲಾಂ ಮತ್ತು ನಫೀಸ್ ಇಕ್ಬಾಲ್ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು.