ಕರಾಚಿ: ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪಾಕಿಸ್ತಾನದ ಯುವ ಬ್ಯಾಟ್ಸ್ಮನ್ ಬಾಬರ್ ಅಜಮ್ರ ಆಟವನ್ನು ಪ್ರಶಂಸಿಸಿದ್ದಾರೆ. ಆದರೆ ಅವರನ್ನು ಕೊಹ್ಲಿಯೊಂದಿಗೆ ಹೋಲಿಕೆ ಮಾಡಿ ಉತ್ತಮ ಬ್ಯಾಟ್ಸ್ಮನ್ ಯಾರು ಎಂದು ಹೇಳಲು ತಾವು ಬಯಸುವುದಿಲ್ಲ ಎಂದಿದ್ದಾರೆ.
ಪ್ರಸ್ತುತ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ. ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರು ಇಬ್ಬರ ಬ್ಯಾಟಿಂಗ್ ಶೈಲಿ ಮತ್ತು ಸ್ಥಿರತೆಗನುಗುಣವಾಗಿ ತಮ್ಮದೇ ಆದ ಅಭಿಪ್ರಾಯವನ್ನು ಮಂಡಿಸಿ ಒಬ್ಬರನ್ನು ಹೆಸರಿಸಿದ್ದಾರೆ. ಆದರೆ ಕೊಹ್ಲಿಯನ್ನು ಆಯ್ಕೆ ಮಾಡಿದವರೆಲ್ಲಾ ಬಾಬರ್ ಇನ್ನೂ ಕಿರಿಯ ಆಟಗಾರ ಎಂಬುದನ್ನು ಒತ್ತಿ ಹೇಳಿದ್ದಾರೆ.
ಈ ವಿಚಾರವಾಗಿ ಅಜರುದ್ದೀನ್ ವಿಭಿನ್ನವಾಗಿ ಉತ್ತರಿಸಿದ್ದು, ಬಾಬರ್ ಇನ್ನೂ ಚಿಕ್ಕವನು. ಅವರು ಭವಿಷ್ಯದಲ್ಲಿ ಬಹಳಷ್ಟು ಕ್ರಿಕೆಟ್ ಆಡಬೇಕಿದೆ. ಈ ಹಿಂದೆ ಪಾಕಿಸ್ತಾನ ಸೃಷ್ಠಿಸಿರುವ ಅತ್ಯುತ್ತಮ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಅಜಮ್ ತನ್ನ ಹೆಸರನ್ನು ಸೇರಿಸಿಕೊಳ್ಳಲು ಅಗತ್ಯವಾದ ಕೌಶಲ್ಯ ಮತ್ತು ಗುಣಗಳನ್ನು ಹೊಂದಿದ್ದಾನೆ ಎಂದು ಹೇಳಿದ್ದಾರೆ.
ಆದರೆ ಕೊಹ್ಲಿ ಮತ್ತು ಅಜಮ್ ನಡುವಿನ ಹೋಲಿಕೆಗಳನ್ನು ನಾನು ನಂಬುವುದಿಲ್ಲ. ಒಬ್ಬ ಬ್ಯಾಟ್ಸ್ಮನ್ ಉತ್ತಮವಾಗಿ ಆಡುತ್ತಾನೆ ಎಂದಾದರೆ, ಅವನ ಬ್ಯಾಟಿಂಗ್ ಶೈಲಿಯನ್ನು ನಾವು ಆನಂದಿಸಬೇಕು. ಮತ್ತು ಅವನನ್ನು ಬೇರೊಬ್ಬ ಆಟಗಾರನೊಂದಿಗೆ ಹೋಲಿಸುವ ಬದಲು ಆತನ ಆಟವನ್ನು ಮಾತ್ರ ಪ್ರಶಂಸಿಸಬೇಕು ಅನ್ನೋದು ಅವರ ಅಭಿಪ್ರಾಯ.
ಇತ್ತೀಚೆಗೆ ಈ ಕುರಿತು ಪ್ರತಿಕ್ರಿಯಿಸಿದ ಬಾಬರ್, ತಮ್ಮನ್ನು ಕೊಹ್ಲಿಯೊಂದಿಗೆ ಹೋಲಿಸಬೇಡಿ. ಬದಲಾಗಿ ಪಾಕಿಸ್ತಾನದ ಕ್ರಿಕೆಟ್ ಲೆಜೆಂಡ್ಗಳಾದ ಜಾವೇದ್ ಮಿಯಾಂದಾದ್, ಮೊಹಮ್ಮದ್ ಯೂಸುಫ್ ಹಾಗೂ ಯೂನಿಸ್ ಖಾನ್ ಜೊತೆ ಹೋಲಿಸುವುದನ್ನು ನಾನು ಬಯಸುತ್ತೇನೆ ಎಂದು ಪತ್ರಕರ್ತರಿಗೆ ತಿಳಿಸಿದ್ದರು.