ಹೈದರಾಬಾದ್ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಹೆಚ್‌ಸಿಎ)ಯ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಹೆಚ್‌ಸಿಎ ಸದಸ್ಯರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೆಚ್‌ಸಿಎ ಸದಸ್ಯರು ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯೂಸೆಫ್ ಎಂಬುವರಿಗೆ ವೇತನ ಹೆಚ್ಚಳ, ಬೋನಸ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎಂದು ಅಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ರಂಗಸ್ವಾಮಿ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಖಜಾಂಚಿ ಸುರೇಂದ್ರ ಅಗರ್ವಾಲ್‌ಗೆ ಮಾಹಿತಿ ನೀಡದೆ ಅಧ್ಯಕ್ಷ ಅಜರುದ್ದೀನ್ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದರಂತೆ.
ಇದೇ ವಿಚಾರವಾಗಿ ಅಗರ್ವಾಲ್, ಯೂಸೆಫ್ ಅವರನ್ನು ಪ್ರಶ್ನೆ ಮಾಡಿದ್ದಾಗ, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಹೆಚ್‌ಸಿಎ ಮತ್ತೊಬ್ಬ ಸದಸ್ಯ ಮೊಯಿಜ್ ಸಹ ಯೂಸೆಫ್ ಮತ್ತು ಮೊಹಮ್ಮದ್ ಅಜರುದ್ದೀನ್ ಅವರನ್ನು ನಿಂದಿಸಿದ್ದಾರಂತೆ. ಈ ಘಟನೆ ಅಜರುದ್ದೀನ್ ಅವರ ಅನುಪಸ್ಥಿತಿಯಲ್ಲಿ ನಡೆದಿದೆ. ಆದರೆ, ತಡವಾಗಿ ಅಜರ್ ಅವರಿಗೆ ಯೂಸೆಫ್ ಮಾಹಿತಿ ನೀಡಿದ್ದಾರೆ.
ಸದ್ಯ ದೂರು ಆಧರಿಸಿ ಐಪಿಸಿ ಸೆಕ್ಷನ್ 504, 506 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಇನ್ಸ್ ಪೆಕ್ಟರ್ ರಂಗಸ್ವಾಮಿ ತಿಳಿಸಿದ್ದಾರೆ.