ಬ್ರಿಸ್ಬೇನ್: ಆಸ್ಟ್ರೇಲಿಯಾ ತಂಡದ ಉದಯೋನ್ಮುಖ ಬ್ಯಾಟ್ಸ್ಮನ್ ಮಾರ್ನಸ್ ಲಾಬುಶೇನ್ ಆಸ್ಟ್ರೇಲಿಯಾ ತಂಡದಲ್ಲಿ ಮೂರು ಮಾದರಿಯ ಕ್ರಿಕೆಟ್ನಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಟೆಸ್ಟ್ ಕ್ರಿಕೆಟ್ನಲ್ಲಿ ಲಾಬುಶೇನ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಕೂಡ ಆಗಿರುವ ಲಾಬುಶೇನ್ಗೆ ತಾವು ಮೂರು ಮಾದರಿಯ ಕ್ರಿಕೆಟಿಗ ಎನಿಸಿಕೊಳ್ಳುವ ಬಯಕೆಯಿದೆ. ಅದನ್ನು ಈಡೇರಿಸಿಕೊಳ್ಳುವುದೇ ನನ್ನ ಗುರಿ ಎಂದಿದ್ದಾರೆ.
ಸ್ಪೋರ್ಟ್ಸ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಆಟದ ಮಾದರಿ ಯಾವುದು ಎಂಬುಕ್ಕಿಂತ ನೀವು ಉತ್ತಮ ಪ್ರದರ್ಶನ ನೀಡಲು ಬಯಸಬೇಕು. ಏಕದಿನ ಕ್ರಿಕೆಟ್ನ ಕೆಲವೊಂದು ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಹೊಂದುತ್ತಿದ್ದೇನೆ. ಬೌಲಿಂಗ್ನಲ್ಲೂ ಸ್ಥಿರತೆ ಸಾಧಿಸಲು ಬಯಸುತ್ತಿದ್ದೇನೆ. ಪಂದ್ಯದ ಮಧ್ಯದಲ್ಲಿ ನಾಯಕನಿಗೆ ನಾನು ಉತ್ತಮ ಆಯ್ಕೆಯಾಗಿರುತ್ತೇನೆ. ಡೆತ್ ಓವರ್ಗಳಲ್ಲಿ ನನ್ನ ಬ್ಯಾಟಿಂಗ್ ಉತ್ತಮಗೊಳಿಸಿಕೊಳ್ಳುವುದರ ಕುರಿತು ಕೆಲಸ ಮಾಡುತ್ತಿದ್ದೇನೆ ಎಂದು ಲಾಬುಶೇನ್ ತಿಳಿಸಿದ್ದಾರೆ.
ಇಷ್ಟೆಲ್ಲಾ ಕೌಶಲ್ಯಗಳ ಮೇಲೆ ಕೆಲಸ ಮಾಡಲು 5 ತಿಂಗಳು ನನಗೆ ಸಿಕ್ಕಿದ್ದು ಸಂತೋಷವಾಗಿದೆ. ನೀವು ಕ್ರಿಕೆಟ್ ಆಡುತ್ತಿದ್ದರೂ ಅವಕಾಶ ಸಿಗದ ಸಂದರ್ಭದಲ್ಲಿ ಸಿಗುವ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ದಾರಿ ಕಂಡುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಕೇಳಿದ್ದಕ್ಕೆ, ತಾವು ಅದರ ಬಗ್ಗೆ ಆಲೋಚಿಸಿಲ್ಲ ಎಂದು ಲಾಬುಶೇನ್ ತಿಳಿಸಿದ್ದಾರೆ. ನಾನು ನಾಯಕನಾಗಲು ಇಷ್ಟ ಪಡುತ್ತೇನೆ. ಆದರೆ ಅದೊಂದು ಕಿರೀಟ ಎಂದು ನಾನು ಬಯಸುವುದಿಲ್ಲ. ನಾನು ಕ್ರಿಕೆಟ್ ಆನಂದಿಸುತ್ತೇನೆ. ಆಸ್ಟ್ರೇಲಿಯಾ ತಂಡಕ್ಕೆ ರನ್ ಗಳಿಸಲು ಬಯಸುತ್ತೇನೆ. ಏಕೆಂದರೆ ಅದು ನನ್ನ ಕೆಲಸ ಎಂದಿದ್ದಾರೆ.
ಸುದೀರ್ಘ ವಿರಾಮದ ಬಳಿಕ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ನೆಲದಲ್ಲಿ ಸೀಮಿತ ಓವರ್ಗಳ ಸರಣಿಯನ್ನಾಡಲು ತೆರಳಲಿದೆ. ಆಗಸ್ಟ್ 24ರಂದು ಆಸೀಸ್ ತಂಡ ಡರ್ಬಿಶೈರ್ಗೆ ಪಯಣ ಬೆಳಸಲಿದೆ. ಸೆಪ್ಟೆಂಬರ್ 4, 6 ಮತ್ತು 8ರಂದು ಟಿ-20 ಹಾಗೂ 11, 13 ಮತ್ತು 16ರಂದು ಏಕದಿನ ಪಂದ್ಯಗಳು ನಡೆಯಲಿವೆ.