ಕರಾಚಿ (ಪಾಕಿಸ್ತಾನ): ಡಿಸೆಂಬರ್ - ಜನವರಿಯಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್ ಘೋಷಿಸಿದ್ದಾರೆ.
ಈ ತಿಂಗಳ ಕೊನೆಯಲ್ಲಿ ಟಿ 20, ನಾಲ್ಕು ಟೆಸ್ಟ್ ಪಂದ್ಯಗಳು ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲು ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಟೆಸ್ಟ್ ಸರಣಿಯು ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ಪ್ರಾರಂಭವಾಗಲಿದೆ.
"ಆಸ್ಟ್ರೇಲಿಯಾದ ವೇಗದ ಬೌಲಿಂಗ್ ವಿಶ್ವದಲ್ಲೇ ಅತ್ಯುತ್ತಮವಾದುದು ಎಂದು ನಾನು ಭಾವಿಸುತ್ತೇನೆ. ಅವರ ತಂಡದಲ್ಲಿ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್ ಮತ್ತು ಇತರ ಉನ್ನತ ದರ್ಜೆಯ ಬೌಲರ್‌ಗಳಿದ್ದಾರೆ. ಇದು ನಿಕಟ ಸ್ಪರ್ಧೆಯಾಗಲಿದೆ, ಆದರೆ ನನ್ನ ಪ್ರಕಾರ ಆಸ್ಟ್ರೇಲಿಯಾ ಗೆಲುವು ಸಾಧಿಸುವ ಸಾಧ್ಯತೆಯಿದೆ" ಎಂದು ಅಕ್ರಮ್ ಹೇಳಿದ್ದಾರೆ.
"ಭಾರತ ತಂಡದಲ್ಲಿಯೂ ಮೊಹಮ್ಮದ್ ಶಮಿ, ಬುಮ್ರಾ, ಸೈನಿ ಸೇರಿ ಇತರ ಉತ್ತಮ ಬೌಲರ್ಗಳು ಇದ್ದಾರೆ" ಎಂದು ಅವರು ಹೇಳಿದರು.