ಲಾರ್ಡ್ಸ್: ಸೆಮಿಫೈನಲ್ ಪ್ರವೇಶ ಪಡೆದುಕೊಳ್ಳುವ ಕನಸು ಕಾಣುತ್ತಿದ್ದ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲ್ಯಾಂಡ್ ತಂಡಕ್ಕೆ ಆಸ್ಟ್ರೇಲಿಯಾ ಶಾಕ್ ನೀಡಿದೆ. ಕಾಂಗರೂ ತಂಡದ ಸಂಘಟಿತ ಬೌಲಿಂಗ್ ದಾಳಿಯಿಂದಾಗಿ ಸಾಧಾರಣ ಗುರಿ ತಲುಪುವಲ್ಲಿ ವಿಫಲಗೊಂಡ ಕೇನ್ ವಿಲಿಯಮ್ಸನ್ ಪಡೆ ಹೀನಾಯ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೆಲಿಯಾ ಪಡೆ ಆರಂಭಿಕ ಆಘಾತದ ನಡುವೆ ಕೂಡ ಉಸ್ಮಾನ್ ಖವಾಜ್(88ರನ್) ಹಾಗೂ ಅಲೆಕ್ಸ್ ಕ್ಯಾರಿ(71ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ 243ರನ್ಗಳಿಕೆ ಮಾಡಿತು.
ಕಿವೀಸ್ ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಟ್ರೆಂಟ್ ಬೌಲ್ಟ್ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸೇರಿದಂತೆ 4ವಿಕೆಟ್ ಪಡೆದುಕೊಂಡರು.
ಆಸ್ಟ್ರೇಲಿಯಾ ನೀಡಿದ್ದ 244ರನ್ಗಳ ಗುರಿ ಬೆನ್ನತ್ತುವಲ್ಲಿ ವಿಫಲಗೊಂಡ ನ್ಯೂಜಿಲ್ಯಾಂಡ್ ತಂಡ ಕಾಂಗರೂಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 43.4ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 157ರನ್ ಮಾತ್ರ ಗಳಿಕೆ ಮಾಡಿತು. ಹೀಗಾಗಿ 86ರನ್ಗಳ ಹೀನಾಯ ಸೋಲು ಕಾಣುವಂತಾಯಿತು. ಕಿವೀಸ್ ತಂಡದ ಪರ ನಾಯಕ ಕೇನ್ ವಿಲಿಯಮ್ಸನ್ (40ರನ್) ಹಾಗೂ ರಾಸ್ ಟೆಲರ್(30ರನ್)ಗಳಿಸಿ ಹೆಚ್ಚಿನ ಸ್ಕೋರ ಗಳಿಸಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟ್ರಾರ್ಕ್ ಬರೋಬ್ಬರಿ 5ವಿಕೆಟ್ ಪಡೆದು ಮಿಂಚಿದರೆ, ಬೆಹ್ರೆಂಡ್ರಾಫ್ 2ವಿಕೆಟ್ಹಾಗೂ ಕುಮ್ಮಿನ್ಸ್, ಸ್ಮೀತ್ ತಲಾ 1ವಿಕೆಟ್ ಪಡೆದುಕೊಂಡರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 14 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
ಸೆಮೀಸ್ಗೆ ಲಗ್ಗೆಯಿಡುವ ಕನಸು ಕಾಣುತ್ತಿದ್ದ ನ್ಯೂಜಿಲ್ಯಾಂಡ್ಗೆ ಮತ್ತಷ್ಟು ಹಿನ್ನಡೆಯಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಕಾರಣ ಉಳಿದಿರುವ ಕೊನೆಯ ಪಂದ್ಯದಲ್ಲಿ ಗೆಲುವು ದಾಖಲು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.