ಮೆಲ್ಬೋರ್ನ್: ಫೆಬ್ರವರಿ 21ರಿಂದ ಪ್ರಾರಂಭವಾಗಲಿರುವ ಮಹಿಳಾ ಟಿ-20 ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲಿಸ್ ಪೆರ್ರಿ ಟೂರ್ನಿಯ ಪ್ರಚಾರಕ್ಕಾಗಿ ಗೋಡೆಯ ಮೇಲೆ ಬರೆದಿರುವ ಆಕರ್ಷಕ ವರ್ಣಚಿತ್ರವನ್ನು ಅನಾವರಣಗೊಳಿಸಿದ್ದಾರೆ.

ಕ್ರಿಕೆಟ್ ಆಟಗಾರ್ತಿ ಎಲಿಸ್ ಪೆರ್ರಿ ಮತ್ತು ಖ್ಯಾತ ಗಾಯಕಿ ಕೇಟ್ ಪೆರ್ರಿ ಅವರ ಚಿತ್ರಗಳನ್ನ ಗೋಡೆಯ ಮೇಲೆ ಬರೆಯಲಾಗಿದೆ. ಕಲಾವಿದರೊಬ್ಬರು ಮೆಲ್ಬೋರ್ನ್‌ನ ಹೊಸಿಯರ್ ಪ್ರದೇಶದ ದಾರಿಯಲ್ಲಿ ಬರೆಯಲಾದ ಈ ವರ್ಣಚಿತ್ರಕ್ಕೆ ಎಲಿಸ್ ಪೆರ್ರಿ ಅಂತಿಮ ಟಚ್ ನೀಡಿದರು.

ಫೆಬ್ರವರಿ 21 ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅತಿದೊಡ್ಡ ಮಹಿಳಾ ಕ್ರೀಡಾಕೂಟದಲ್ಲಿ ಎಲಿಸ್ ಪೆರ್ರಿ ಮತ್ತು ಕೇಟಿ ಪೆರ್ರಿ ಇಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮತ್ತು ಮಾರ್ಚ್ 8ರ ಭಾನುವಾರ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಎಂಸಿಜಿಯಲ್ಲಿ ಫೈನಲ್ ಪಂದ್ಯ ಆಯೋಜನೆ ಮಾಡಲಾಗಿದೆ. ಫೈನಲ್ ಪಂದ್ಯದ ದಿನದಂದು ಕೇಟ್ ಪೆರ್ರಿ ಸಂಗೀತ ಪ್ರದರ್ಶನ ನೀಡಲಿದ್ದಾರೆ.

ಜಾಗತಿಕವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸುವ ದಿನದಂದೇ ಫೈನಲ್ ಪಂದ್ಯ ಆಯೋಜಿಸಲಾಗಿದ್ದು, ಮಹಿಳೆಯರ ಪಂದ್ಯಕ್ಕೆ ಹೆಚ್ಚಿನ ಪ್ರೇಕ್ಷಕರು ಹಾಜರಾಗುವ ಮೂಲಕ ಹೊಸ ದಾಖಲೆಯನ್ನು ನಿರ್ಮಾಣ ಮಾಡಲು ಫೈನಲ್ ಪಂದ್ಯ ಅವಕಾಶ ನೀಡುತ್ತಿದೆ. ಈ ಹಿಂದೆ 1999ರಲ್ಲಿ ಕ್ಯಾಲಿಫೋರ್ನಿಯಾದ ಪಸಡೆನಾದಲ್ಲಿ ನಡೆದ ಫಿಫಾ ಫುಟ್ಬಾಲ್ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 90,185 ಪ್ರೇಕ್ಷಕರು ಹಾಜರಾಗಿದ್ದು ದಾಖಲೆಯಾಗಿದೆ.