ಹೈದರಾಬಾದ್: ಐಪಿಎಲ್ ಟೂರ್ನಿ ನಂತರ ಆಸೀಸ್ಗೆ ಪ್ರಯಾಣ ಬೆಳೆಸಿರುವ ಟೀಂ ಇಂಡಿಯಾ ಆಟಗಾರರು ಏಕದಿನ, ಟಿ-20, ಟೆಸ್ಟ್ ಸರಣಿ ಆಡಲಿದ್ದು, ಸೀಮಿತ ಓವರ್ಗಳ ಪಂದ್ಯದಲ್ಲಿ ಹೊಸ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯಲಿದ್ದಾರೆ.
ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಹೊಸ ಜರ್ಸಿ ಧರಿಸಲಿದ್ದಾರೆ ಎಂದು ಮಾಧ್ಯಮ ಸಂಸ್ಥೆಯ ಮೂಲಗಳು ತಿಳಿಸಿವೆ.
1992ರ ಏಕದಿನ ವಿಶ್ವಕಪ್ ವೇಳೆ ಟೀಂ ಇಂಡಿಯಾ ಆಟಗಾರರು ಧರಿಸಿದ ಜೆರ್ಸಿಯ ಬಣ್ಣದಿಂದ ಸ್ಫೂರ್ತಿ ಪಡೆದು ನೂತನ ಜೆರ್ಸಿ ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ. ಹೊಸ ಕಿಟ್ ಕಡು ನೀಲಿ (Navy Blue) ಬಣ್ಣದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡವು ಧರಿಸಿರುವ ಸಾಂಪ್ರದಾಯಿಕ ಆಕಾಶ ನೀಲಿ ಬಣ್ಣದ ಜರ್ಸಿಗೆ ಬದಲಾಗಿ ಹೊಸ ಜೆರ್ಸಿ ತೊಟ್ಟು ಆಟಗಾರರು ಕಣಕ್ಕಿಳಿಯಲಿದ್ದಾರೆ.
ಭಾರತ ತಂಡದ ವಿರುದ್ಧದ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಕೂಡ ಹೊಸ ಜೆರ್ಸಿ ತೊಟ್ಟು ಆಡಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಹೊಸದಾಗಿ ಡಿಸೈನ್ ಆಗಿರುವ ಜರ್ಸಿಯನ್ನು ಅನಾವರಣಗೊಳಿಸಿದೆ. ಈ ವಿಶೇಷ ಜರ್ಸಿಯನ್ನು ಎಎಸ್‌ಐಸಿಎಸ್(ASICS) ಕ್ರೀಡಾ ವಸ್ತುಗಳ ತಯಾರಿಕಾ ಸಂಸ್ಥೆ ಮತ್ತು ಆ್ಯಂಟಿ ಫಿಯೋನಾ ಕ್ಲಾರ್ಕ್ ಮತ್ತು ಕರ್ಟ್ನಿ ಹ್ಯಾಗನ್ ಎಂಬ ಇಬ್ಬರು ಸ್ಥಳೀಯ ಮಹಿಳೆಯರ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೆಲಿಯಾ ತಿಳಿಸಿದೆ.
ಈ ವಿನ್ಯಾಸ, ಪೂರ್ವ ಕ್ರಿಕೆಟಿಗರು, ಪ್ರಸ್ತುತ ಮತ್ತು ಭವಿಷ್ಯದ ಕ್ರಿಕೆಟಿಗರ ಸಂಕೇತವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಈಗಾಗಲೇ ಆಸ್ಟ್ರೇಲಿಯಾ ಮಹಿಳೆಯರ ತಂಡ ಇಂಗ್ಲೆಂಡ್ ವಿರುದ್ಧ ಈ ವರ್ಷಾರಂಭದಲ್ಲಿ ಇದೇ ವಿನ್ಯಾಸದ ಜೆರ್ಸಿಯಲ್ಲಿ ಆಡಿತ್ತು.