ಸಿಡ್ನಿ(ಆಸ್ಟ್ರೇಲಿಯಾ): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೊಂಡಾಡಿರುವ ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್, ನನ್ನ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ಆಟಗಾರ ವಿರಾಟ್ ಎಂದು ಹೇಳಿದ್ದಾರೆ.
ಬಹುಶ: ವಿರಾಟ್ ಕೊಹ್ಲಿ, ನನ್ನ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ಆಟಗಾರ. ಬ್ಯಾಟಿಂಗ್ ಮಾತ್ರವಲ್ಲದೆ ಅವರ ಶಕ್ತಿ ಮತ್ತು ಆಟದ ಬಗೆಗಿನ ಉತ್ಸಾಹ ನನ್ನ ಗಮನ ಸೆಳೆಯಿತು ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮದವರಿಗೆ ತಿಳಿಸಿದ್ದಾರೆ.
ನಾನು ವಿರಾಟ್ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ. ಮೊದಲ ಮಗುನಿನ ನಿರೀಕ್ಷೆಯಲ್ಲಿರುವ ವಿರಾಟ್, ಟೂರ್ನಿಯಿಂದ ಅರ್ಧಕ್ಕೆ ಹಿಂದಿರುಗುತ್ತಿದ್ದು, ಅವರ ಈ ನಿರ್ಧಾರವನ್ನೂ ಗೌರವಿಸುತ್ತೇನೆ ಎಂದಿದ್ದಾರೆ. ಕೊಹ್ಲಿ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಜನವರಿಯಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಸಮಯದಲ್ಲಿ ಪತ್ನಿಯ ಜೊತೆ ಕಾಲ ಕಳೆಯಲು ವಿರಾಟ್ ಭಾರತಕ್ಕೆ ವಾಪಸ್ ಆಗಲಿದ್ದಾರೆ.
ಅವರೂ ಕೂಡ ನಮ್ಮೆಲ್ಲರಂತೆ ಮನುಷ್ಯ, ನನ್ನ ಯಾವುದೇ ಆಟಗಾರರಿಗೆ ನಾನು ಸಲಹೆ ನೀಡುವುದಾದರೆ, ನಿಮ್ಮ ಮಕ್ಕಳ ಜನನದ ಸಮಯವನ್ನು ಎಂದೂ ಕಳೆದುಕೊಳ್ಳಬಡಿ ಅಂತ ಸಲಹೆ ನೀಡುತ್ತೇನೆ ಎಂದಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಅನುಪಸ್ಥಿತಿ ಖಂಡಿತವಾಗಿಯೂ ಟೆಸ್ಟ್ ಸರಣಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಲ್ಯಾಂಗರ್ ಹೇಳಿದ್ದಾರೆ.