ಕೋಲ್ಕತ್ತಾ: ಬೆಂಗಾಲ್ ತಂಡದ ಅನುಭವಿ ವೇಗಿ ಅಶೋಕ್ ದಿಂಡಾ ಬೇರೆ ರಾಜ್ಯದ ಪರ ಆಡಲು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ನಿಂದ ನಿರಾಪೇಕ್ಷಣ ಪತ್ರ ಪಡೆದಿದ್ದಾರೆ.
2019-20ರ ರಣಜಿ ಆವೃತ್ತಿಯಲ್ಲಿ ಆಂಧ್ರಪ್ರದೇಶದ ವಿರುದ್ಧದ ಪಂದ್ಯದಲ್ಲಿ ತಂಡದಿಂದ ಹೊರಗಿಟ್ಟ ಕಾರಣಕ್ಕೆ ಆಡಳಿತ ಮಂಡಳಿಯೊಂದಿಗೆ ಇವರು ಗಲಾಟೆ ಮಾಡಿಕೊಂಡಿದ್ದರು. ಅಲ್ಲದೆ ನಾಯಕ ಅಭಿಮನ್ಯು ಈಶ್ವರನ್ ಹಾಗೂ ಬೌಲಿಂಗ್ ಕೋಚ್ ರಣದೇಬ್ ಬೋಸ್ ಅವರು ಪ್ರತ್ಯೇಕ ಮಾತುಕತೆ ನಡೆಸುತ್ತಿದ್ದದ್ದನ್ನು ಕಂಡು ದಿಂಡಾ ಕೆಂಡಾಮಂಡಲವಾಗಿದ್ದರು. ಜೊತೆಗೆ, ಕೋಚ್ ನಿಂದನೆ ಮಾಡಿದ್ದ ಆರೋಪವೂ ಇವರ ಮೇಲಿತ್ತು. ಈ ಬೆಳವಣಿಗೆಯ ಬಳಿಕ ಕ್ಷಮೆ ಕೇಳಲು ಹಿಂದೇಟು ಹಾಕಿದ್ದರಿಂದ ಶಿಸ್ತು ಕ್ರಮ ಜರುಗಿಸಿ ಅವರನ್ನು ತಂಡದಿಂದ ಹೊರ ಹಾಕಲಾಗಿತ್ತು.
2020ರ ರಣಜಿಯಲ್ಲಿ ಬೆಂಗಾಲ್ ಪರ ಆಡುವುದಿಲ್ಲ ಎಂದು ಮೊದಲೇ ದಿಂಡಾ ಘೋಷಿಸಿದ್ದರು. ಇದೀಗ ಇವರ ಮನವಿಗೆ ಸ್ಪಂದಿಸಿರುವ ಕ್ರಿಕೆಟ್ ಆಸೋಸಿಯೇಷನ್ ನಿರಾಪೇಕ್ಷಣ ಪತ್ರ ನೀಡಿದ್ದು, 2020-21ರ ರಣಜಿ ಆವೃತ್ತಿಯಲ್ಲಿ ಯಾವುದೇ ತಂಡದ ಪರ ಆಡಲು ನಾವು ಸಮ್ಮತಿಸುತ್ತೇವೆ ಎಂದು ತಿಳಿಸಿದೆ. ಬೆಂಗಾಲ್ ಕ್ರಿಕೆಟ್ಗೆ ನೀಡಿದ ಸೇವೆಯನ್ನು ಗೌರವಿಸುತ್ತೇವೆ ಎಂದೂ ಪತ್ರದಲ್ಲಿ ತಿಳಿಸಿದೆ.