ಕೊಲಂಬೊ : 2011ರ ವಿಶ್ವಕಪ್ ಫೈನಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂದು ಆರೋಪಿಸಿ ವಿವಾದ ಸೃಷ್ಟಿಸಿದ್ದ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಇದೀಗ ಶ್ರೀಲಂಕಾ ಪೊಲೀಸರು ಸಾಕ್ಷ್ಯಾಧಾರಗಳ ಕೊರತೆಯಿಂದ ಮುಚ್ಚಿಯಾಕಿದ ಮೇಲೆ ತಾನೂ ಐಸಿಸಿಗೆ ಸಾಕ್ಷ್ಯ ನೀಡಲು ಸಿದ್ಧನಿದ್ದೇನೆ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಆಟಗಾರರು ಫಿಕ್ಸಿಂಗ್ಗೆ ಒಳಗಾಗಿ ಭಾರತಕ್ಕೆ ವಿಶ್ವಕಪ್ ಮಾರಾಟ ಮಾಡಿದ್ದರೆಂದು ಅಂದಿನ ಕ್ರೀಡಾ ಸಚಿವ ಮಹಿಂದಾನಂದ ಅಲುತ್ಗಮಾಗೆ ಆರೋಪಿಸಿದ್ದರು. ನಂತರ ಇದಕ್ಕೆ ಲಂಕಾ ತಂಡದ ನಾಯಕ ಕುಮಾರ್ ಸಂಗಾಕ್ಕರ ಸೇರಿದಂತೆ ಹಲವು ಕ್ರಿಕೆಟಿಗರು ಸಾಕ್ಷ್ಯಗಳನ್ನು ನೀಡುವಂತೆ ಸವಾಲು ಹಾಕಿದ್ದರು.
ಈ ಬೆಳವಣಿಗೆ ನಡೆದ ಮೇಲೆ ಶ್ರೀಲಂಕಾ ಸರ್ಕಾರ 2011ರ ವಿಶ್ವಕಪ್ ಪಿಕ್ಸಿಂಗ್ ಪ್ರಕರಣ ಕುರಿತು ಕ್ರಿಮಿನಲ್ ತನಿಖೆಗೆ ಆದೇಶಿಸಿತ್ತು. ಈ ವೇಳೆ ಪೊಲೀಸರು, ಕುಮಾರ್ ಸಂಗಾಕ್ಕರ, ಉಪುಲ್ ತರಂಗ ಸೇರಿ ಅನೇಕ ಕ್ರಿಕೆಟಿಗರು ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅರವಿಂದ ಡಿ ಸಿಲ್ವಾರನ್ನು ಸುಮಾರು ತಲಾ 5 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿತ್ತು. ಆದರೆ, ಸೂಕ್ತವಾದ ಸಾಕ್ಷ್ಯಾಧಾರ ಸಿಗದ ಕಾರಣ ಪ್ರಕರಣವನ್ನು ಕೈಬಿಡುತ್ತಿರುವುದಾಗಿ ನಿನ್ನೆ ತಿಳಿಸಿತ್ತು.
ಆದರೆ, ಮಹಿಂದಾನಂದ ಮತ್ತೊಂದು ಬಾಂಬ್ ಸಿಡಿಸಿದ್ದು, 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಫಿಕ್ಸಿಂಗ್ ನಡೆದಿದೆ ಎಂಬುವುದನ್ನು ಸಾಬೀತುಪಡಿಸಲು ಅಗತ್ಯವಿರುವ ಎಲ್ಲಾ ಆಧಾರಗಳನ್ನು ಐಸಿಸಿಗೆ ನೀಡಲು ತಯಾರಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಭಾವಿ ವ್ಯಕ್ತಿಗಳು ಹಣಬಲದಿಂದ ತನಿಖೆಯ ದಾರಿ ತಪ್ಪಿಸಿದ್ದಾರೆ. ಪೊಲೀಸರು ಪ್ರಾಮಾಣಿಕತೆಯಿಂದ ತನಿಖೆ ನಡೆಸಲು ವಿಫಲರಾಗಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಷೆ ಅವರು ಮಧ್ಯಪ್ರವೇಶಿಸಿ ಮರು ತನಿಖೆ ನಡೆಸುವಂತೆ ಐಸಿಸಿ ಮೇಲೆ ಒತ್ತಡ ಹೇರಬೇಕು ಎಂದು ಅವರು ಹೇಳಿದ್ದಾರೆ.