ಪರ್ತ್: ಕ್ರಿಕೆಟ್ ಪಂದ್ಯದಲ್ಲಿ ಕಠಿಣ ಎಂದೇ ಪರಿಗಣಿಸಲಾಗಿರುವ ಅಂಪೈರಿಂಗ್ ಕ್ಷೇತ್ರದಲ್ಲಿ ಪಾಕಿಸ್ತಾನದ ಅಲೀಂ ದಾರ್ ಹೊಸ ದಾಖಲೆ ಬರೆದಿದ್ದಾರೆ.
ವೆಸ್ಟ್ ಇಂಡೀಸ್ ಮೂಲದ ಸ್ಟೀವ್ ಬಕ್ನರ್ 128 ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಇಂದಿನ ನ್ಯೂಜಿಲ್ಯಾಂಡ್-ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂಪೈರಿಂಗ್ ಕಾರ್ಯಕ್ಕೆ ಮೈದಾನಕ್ಕಿಳಿಯುವ ಮೂಲಕ ಅಲೀಂ ದಾರ್ ದಾಖಲೆ ಬರೆದಿದ್ದಾರೆ.
51 ವರ್ಷದ ಅಲೀಂ ದಾರ್ ಪಾಕಿಸ್ತಾನದಲ್ಲಿ ಸುಮಾರು ಒಂದು ದಶಕ ಮೊದಲ ದರ್ಜೆ ಕ್ರಿಕೆಟ್ ಆಡಿದ್ದರು.2003ರಲ್ಲಿ ಆಂಗ್ಲರ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡ ವೇಳೆ ಟೆಸ್ಟ್ ಅಂಪೈರ್ ಆಗಿ ಅಲೀಂ ದಾರ್ ಪದಾರ್ಪಣೆಗೈದಿದ್ದರು.
ಸ್ಟೀವ್ ಬಕ್ನರ್ 1989ರಿಂದ 2009ರ ಅವಧಿಯಲ್ಲಿ 128 ಟೆಸ್ಟ್ ಹಾಗೂ 181 ಏಕದಿನ ಪಂದ್ಯಕ್ಕೆ ಅಂಪೈರ್ ಆಗಿದ್ದರು. ಸದ್ಯ ಅಲೀಂ ದಾರ್ 129ನೇ ಟೆಸ್ಟ್ ಪಂದ್ಯಕ್ಕೆ ಅಂಪೈರಿಂಗ್ ಮಾಡುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ದಾರ್, 207 ಏಕದಿನ ಹಾಗೂ 46 ಟಿ20 ಪಂದ್ಯದಲ್ಲೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ವಿಶ್ವದಾಖಲೆಯ ಪಂದ್ಯಕ್ಕೆ ದಾರ್ ಅಂಪೈರ್:
ಅಂಪೈರಿಂಗ್ನಲ್ಲಿ ಹೊಸ ದಾಖಲೆ ಬರೆದಿರುವ ಅಲೀಂ ದಾರ್ ವಿಶ್ವದಾಖಲೆ ಪಂದ್ಯಕ್ಕೂ ಅಂಪೈರ್ ಆಗಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ.
ಟೆಸ್ಟ್ನಲ್ಲಿ ವಿಂಡೀಸ್ನ ಬ್ರಿಯನಾ ಲಾರಾರ 400* ರನ್ ಹಾಗೂ 2006ರ ದಾಖಲೆಯ 434 ರನ್ ಚೇಸಿಂಗ್(ಆಸ್ಟ್ರೇಲಿಯಾ-ದ.ಆಫ್ರಿಕಾ) ಪಂದ್ಯಗಳಲ್ಲಿ ಅಲೀಂ ದಾರ್ ಅಂಪೈರ್ ಅಗಿದ್ದರು.
2011ರ ವಿಶ್ವಕಪ್ನಲ್ಲಿ ಅಲೀಂ ದಾರ್ ನೀಡಿದ್ದ 15 ತೀರ್ಪನ್ನು ಪ್ರಶ್ನಿಸಿ ಆಟಗಾರರ ಮೂರನೇ ಅಂಪೈರ್ ಮೊರೆ ಹೋಗಿದ್ದರು. ಆದರೆ ಎಲ್ಲ 15 ತೀರ್ಪುಗಳು ಸರಿಯಾಗಿದ್ದವು. ಇದು ದಾರ್ ಅಂಪೈರಿಂಗ್ ದಕ್ಷತೆ ಒಂದು ಸಣ್ಣ ಉದಾಹರಣೆ.