ನವದೆಹಲಿ : ಪಾಕಿಸ್ತಾನದ ಅಂಪೈರ್ ಅಲೀಂ ದಾರ್ ಇಂದಿನ ಪಾಕ್ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ಪಂದ್ಯಗಳಿಗೆ ಅಂಪೈರ್ ಆದ ದಾಖಲೆಗೆ ಪಾತ್ರರಾಗಿದ್ದಾರೆ.
ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡುವಿನ 2ನೇ ಏಕದಿನ ಪಂದ್ಯ ಅಲೀಂ ದಾರ್ಗೆ ಇಂದು 210ನೇ ಏಕದಿನ ಪಂದ್ಯವಾಗಲಿದೆ. ಈ ಮೂಲಕ ದಕ್ಷಿಣ ಆಫ್ರಿಕಾದ ರೂಡಿ ಕೊಯೆರ್ಟ್ಜನ್ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ರೂಡಿ ಕೊರ್ಟ್ಜನ್ 209 ಪಂದ್ಯಗಳಿಗೆ ಅಂಪೈರ್ ಆಗಿದ್ದರು.
ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿರುವ ದಾಖಲೆ ಕೂಡ ಅಲೀಂ ದಾರ್ ಹೆಸರಿನಲ್ಲಿದೆ. ಅವರು 132 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಕಳೆದ ವರ್ಷ ವೆಸ್ಟ್ ಇಂಡೀಸ್ನ ಸ್ಟೀವ್ ಬಕ್ನರ್ ಅವರ ದಾಖಲೆ ಬ್ರೇಕ್ ಮಾಡಿದ್ದರು. ಟಿ20 ಕ್ರಿಕೆಟ್ನಲ್ಲೂ 46 ಪಂದ್ಯಗಳಲ್ಲಿ ಅಂಪೈರ್ ಆಗಿದ್ದು, 2ನೇ ಸ್ಥಾನದಲ್ಲಿದ್ದಾರೆ.