ನವದೆಹಲಿ: ಇಂಗ್ಲೆಂಡ್ ತಂಡದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ ಅಲಿಸ್ಟರ್ ಕುಕ್ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರಿಗೆ ಭಾರತ ತಂಡದ ವಿರಾಟ್ ಕೊಹ್ಲಿ ಅವರನ್ನ ಹೋಲಿಸಿದ್ದಾರೆ.
ಸಂಡೆ ಟೈಮ್ಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕುಕ್ 2004ರಲ್ಲಿ ವಿಂಡೀಸ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಅಭ್ಯಾಸ ಪಂದ್ಯದಲ್ಲಿ ನಾನು ಎಂಸಿಸಿ ತಂಡದ ಪರ ಆಡಿದ್ದೆ. ವಿಂಡೀಸ್ ತಂಡದಲ್ಲಿದ್ದ ಲಾರಾ ಲಂಚ್ ಬ್ರೇಕ್ನಿಂದ ಟೀ ಬ್ರೇಕ್ ವರೆಗಿನ ಸಮಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ನಮ್ಮ ತಂಡದಲ್ಲಿ ಸೈಮನ್ ಜೋನ್ಸ್, ಮ್ಯಾಥ್ಯೂ ಹೋಗಾರ್ಡ್ ಹಾಗೂ ಮಿನ್ ಪಟೇಲ್ ಅವರಂತಹ ಬೌಲರ್ಗಳನ್ನ ಲಾರಾ ಅತ್ಯುತ್ತಮವಾಗಿ ಎದುರಿಸಿದ್ದರು ಎಂದು ಕುಕ್ ಸ್ಮರಿಸಿಕೊಂಡರು.

ಟೆಸ್ಟ್ ಕ್ರಿಕೆಟ್ ನಲ್ಲಿ 400 ರನ್ಗಳಿಸಿ ವಿಶ್ವದಾಖಲೆ ಹೊಂದಿರುವ ಲಾರಾ ವೆಸ್ಟ್ ಇಂಡೀಸ್ ಪರ 131 ಟೆಸ್ಟ್ ಪಂದ್ಯಗಳಿಂದ 11,953 ರನ್ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲೂ 299 ಪಂದ್ಯಗಳಿಂದ 10,405 ರನ್ ಗಳಿಸಿದ್ದಾರೆ.
ಲಾರಾ ಎರಡು ಮಾದರಿಯ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡಲು ಅವರಲ್ಲಿದ್ದ ಬ್ಯಾಟಿಂಗ್ ತಂತ್ರಗಾರಿಕೆಯೇ ಕಾರಣ. ಪ್ರಸ್ತುತ ಕ್ರಿಕೆಟ್ನಲ್ಲಿ ಭಾರತದ ವಿರಾಟ್ ಕೊಹ್ಲಿ ಲಾರಾ ಅವರಂತೆಯೇ ಬ್ಯಾಟಿಂಗ್ ತಂತ್ರಗಾರಿಕೆ ಹೊಂದಿದ್ದಾರೆ ಎಂದು ಕುಕ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಕೌಶಲ್ಯಗಳನ್ನು ಹೊಂದಿದ್ದಾರೆ. ಇದರಿಂದ ಅವರು ಮೂರು ವಿಭಾಗದ ಕ್ರಿಕೆಟ್ನಲ್ಲೂ ಅದ್ಭುತವಾಗಿ ರನ್ಗಳಿಸುತ್ತಾರೆ. ಹಾಗಾಗಿ ತನ್ನ ನೆಚ್ಚಿನ ಟಾಪ್ 5 ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಕುಕ್ ಹೇಳಿದ್ದಾರೆ.
ಲಾರಾ ಮತ್ತು ಕೊಹ್ಲಿಯನ್ನು ಬಿಟ್ಟರೆ ರಿಕಿ ಪಾಂಟಿಂಗ್, ಕುಮಾರ್ ಸಂಗಾಕ್ಕಾರ ಹಾಗೂ ಜಾಕ್ ಕಾಲೀಸ್ ಕೂಡ ಕುಕ್ ಪಟ್ಟಿ ಮಾಡಿರುವ ಶ್ರೇಷ್ಠ ಬ್ಯಾಟ್ಸ್ಮನ್ಗಳಾಗಿದ್ದಾರೆ.