ಮುಂಬೈ : ಭಾರತ ತಂಡದ ಮಾಜಿ ಆಟಗಾರರಾದ ಅಜಿತ್ ಅಗರ್ಕರ್, ಚೇತನ್ ಶರ್ಮಾ, ಮಣಿಂದರ್ ಸಿಂಗ್ ಹಾಗೂ ಶಿವ ಸುಂದರ್ ದಾಸ್ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ ಮೂರು ಆಯ್ಕೆಗಾರರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.
ಈ ವರ್ಷದ ಆರಂಭದಲ್ಲಿ ಕರ್ನಾಟಕದ ಸುನೀಲ್ ಜೋಶಿ, ಹರ್ವಿಂದರ್ ಸಿಂಗ್ರವನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಇವರಿಬ್ಬರು ಎಂಎಸ್ಕೆ ಪ್ರಸಾದ್ ಮತ್ತು ಗಗನ್ ಖೋಡ ಬದಲಿಗೆ ಆಯ್ಕೆ ಸಮಿತಿಗೆ ಸೇರಿಕೊಂಡಿದ್ದರು. ಇದೀಗ ಉಳಿದ ಮೂವರಾದ ಸರಂದೀಪ್ ಸಿಂಗ್, ಜತಿನ್ ಚಟರ್ಜಿ ಮತ್ತು ದೇವಾಂಗ್ ಗಾಂಧಿ ಅವರ 4 ವರ್ಷಗಳ ಅವಧಿ ಮುಗಿದಿರುವುದರಿಂದ ಅವರ ಹುದ್ದೆಗೆ ಬಿಸಿಸಿಐ ಅರ್ಜಿ ಅಹ್ವಾನಿಸಿದೆ.
ಈ ಬಾರಿ ಜೋನಲ್ ನಿಯಮವನ್ನು ಬಿಟ್ಟು ಆಯ್ಕೆಗಾರರನ್ನು ಆಯ್ಕೆಮಾಡಬಹುದು ಎನ್ನಲಾಗುತ್ತಿದೆ. ಯಾಕೆಂದರೆ, ಪ್ರಸ್ತುತ ಖಾಲಿಯಿರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಸಲ್ಲಿಸಲು ತಿಳಿಸಿರುವ ಬಿಸಿಸಿಐ, ಅದರಲ್ಲಿ ಜೋನಲ್ ಬಗ್ಗೆ ಯಾವುದೇ ಮಾಹಿತಿಯನ್ನು ಸೂಚಿಸಿಲ್ಲ ಎಂದು ತಿಳಿದು ಬಂದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಪಾರ ಅನುಭವವಿರುವ ಅಜಿತ್ ಅಗರ್ಕರ್ ಆಯ್ಕೆಗಾರನಾಗಿ ಆಯ್ಕೆಯಾದ್ರೆ ಅವರೆ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿ ಎನ್ನಲಾಗುತ್ತಿದೆ. ಯಾಕೆಂದರೆ, ಅವರು ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವವರು ಆಯ್ಕೆ ಸಮಿತಿ ಅಧ್ಯಕ್ಷರಾಗಬೇಕೆಂಬ ನಿಯಮವಿದೆ. ಕಳೆದ ಬಾರಿ ಅಗರ್ಕರ್ ಅರ್ಜಿ ಸಲ್ಲಿಸಿದ್ದರಾದರೂ ಜೋನಲ್ ಪಾಲಿಸಿಯಿಂದ ಹುದ್ದೆ ತಪ್ಪಿಸಿಕೊಂಡಿದ್ದರು.