ಕೊಲೊಂಬೊ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಹೋದರ ಸೋಹೈಲ್ ಖಾನ್ ಶ್ರೀಲಂಕಾದಲ್ಲಿ ಮುಂದಿನ ತಿಂಗಳು ಶುರುವಾಗಲಿರುವ ಲಂಕಾ ಪ್ರೀಮಿಯರ್ ಲೀಗ್ನ ತಂಡವೊಂದರ ಮಾಲೀಕರಾಗಿದ್ದಾರೆ.
ನವೆಂಬರ್ 21ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ 5 ಫ್ರಾಂಚೈಸಿಗಳಲ್ಲಿ ಒಂದಾಗಿರುವ ಕ್ಯಾಂಡಿ ಟಸ್ಕರ್ಸ್ ತಂಡದ ಮಾಲೀಕತ್ವ ಪಡೆದಿದ್ದಾರೆ. ಈ ಮೂಲಕ ಶಾರುಖ್ ಖಾನ್ ನಂತರ ಕ್ರಿಕೆಟ್ ಲೀಗ್ನಲ್ಲಿ ತಂಡದ ಮಾಲೀಕತ್ವ ಪಡೆದ ಬಾಲಿವುಡ್ ನಟ ಎಂಬ ಶ್ರೇಯಕ್ಕೆ ಸೋಹೈಲ್ ಖಾನ್ ಪಾತ್ರರಾಗಿದ್ದಾರೆ.
ಕ್ಯಾಂಡಿ ಫ್ರಾಂಚೈಸಿಯಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ ಕ್ರಿಸ್ ಗೇಲ್ ಹಾಗೂ ಸ್ಥಳೀಯ ಐಕಾನ್ ಆಟಗಾರರಾಗಿ ತಿಸಾರಾ ಪೆರೆರಾರನ್ನು ಆಯ್ಕೆ ಮಾಡಿಕೊಂಡಿದೆ. ಜೊತೆಗೆ ಶ್ರೀಲಂಕಾ ಟಿ20 ಸ್ಪೆಷಲಿಸ್ಟ್ ಕುಶಾಲ್ ಮೆಂಡಿಸ್, ನುವಾನ್ ಪ್ರದೀಪ್ ಹಾಗೂ ಇಂಗ್ಲೆಂಡ್ ಅನುಭವಿ ಲಿಯಾಮ್ ಫ್ಲಂಕೇಟ್ ಕೂಡ ಇದ್ದಾರೆ.
ಲಂಕಾ ಪ್ರೀಮಿಯರ್ ಲೀಗ್ನ ರೋಮಾಂಚನಕಾರಿ ಟೂರ್ನಿಯ ಭಾಗವಾಗಲು ತುಂಬಾ ಸಂತೋಷವಾಗುತ್ತಿದೆ. ಶ್ರೀಲಂಕಾದ ಅಭಿಮಾನಿಗಳು ಆಟದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ ಮತ್ತು ಅವರು ತಂಡವನ್ನು ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಸೋಹೈಲ್ ಖಾನ್ ತಿಳಿಸಿದ್ದಾರೆ.
ಕ್ರಿಸ್ ಗೇಲ್ ನಿಸ್ಸಂಶಯವಾಗಿ ಯುನಿವರ್ಸಲ್ ಬಾಸ್. ಆದರೆ, ಅವರು ತಂಡದಲ್ಲಿ ಒಬ್ಬಂಟಿಯಾಗಿಲ್ಲ. ಯಾಕೆಂದರೆ, ನಮ್ಮಲ್ಲಿ ಉತ್ತಮ ತಂಡವಿದೆ. ಯುವಕರ ಮತ್ತು ಅನುಭವದ ಸಮತೋಲನವಿದೆ ಮತ್ತು ನಮ್ಮ ತಂಡವನ್ನು ಫೈನಲ್‌ನಲ್ಲಿ ನೋಡಲು ನಾನು ಕಾತರಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.