ನವದೆಹಲಿ: ಭಾರತ ತಂಡದ ಮಂಚೂಣಿ ಟೆಸ್ಟ್ ತಂಡದ ಬೌಲರ್ ಆಗಿರುವ ಇಶಾಂತ್ ಶರ್ಮಾ ಗಾಯಗೊಂಡು ಈಗಾಗಲೆ ಐಪಿಎಲ್ನಿಂದಲೇ ಹೊರಬಿದ್ದಿದ್ದಾರೆ. ಆದರೆ ಇದೀಗ ಆಸ್ಟ್ರೇಲಿಯಾ ಪ್ರವಾಸಕ್ಕೂ ಗೈರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಇಶಾಂತ್ ಶರ್ಮಾ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಅವರು ಸದ್ಯ ಸ್ನಾಯು (left internal oblique muscle) ಸೆಳೆತಕ್ಕೊಳಗಾಗಿದ್ದು, ಮುಂದಿನ ಮೂರು ಅಥವಾ ನಾಲ್ಕು ವಾರಗಳ ಕಾಲ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಅವರು ಮುಂದಿನ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈಗಾಗಲೇ ಇಶಾಂತ್ ಜಾಗಕ್ಕೆ ಬೇರೆ ಆಟಗಾರನನ್ನ ಆಯ್ಕೆಮಾಡಿಕೊಳ್ಳಲು ಅವಕಾಶ ಕೋರಿ ಐಪಿಎಲ್ ಮಂಡಳಿಗೆ ಪತ್ರ ಬರೆದಿದೆ.
ಇಶಾಂತ್ಗೂ ಮುನ್ನ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಕೂಡ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಅವರೂ ಕೂಡ ಆಸ್ಟ್ರೇಲಿಯಾ ಪ್ರವಾಸಕ್ಕೂ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರ ಅನುಪಸ್ಥಿತಿಯಿಂದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಮೇಲೆ ಭಾರತ ತಂಡ ಅವಲಂಬಿತವಾಗಬೇಕಾಗಿದೆ.
ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಶಾಂತ್ ಶರ್ಮಾ 3 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದರು. ಶಮಿ ಹಾಗೂ ಬುಮ್ರಾ ಅವರಿಗೆ ಜೊತೆಯಾಗಿದ್ದ ಇಶಾಂತ್ ಆಸ್ಟ್ರೇಲಿಯಾ ವಿರುದ್ಧ 2-1ರಲ್ಲಿ ಐತಿಹಾಸಿಕ ಸರಣಿ ಗೆಲ್ಲುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು