ದುಬೈ : ಆಸ್ಟ್ರೇಲಿಯಾದ ಯುವ ಬ್ಯಾಟ್ಸ್ಮನ್ ಜೋಶ್ ಫಿಲಿಪ್ಪೆ ಅವರಲ್ಲಿ ನನ್ನನ್ನು ನೋಡುತ್ತೇನೆ ಎಂದು ಆರ್ಸಿಬಿ ಆಟಗಾರ ಎಬಿಡಿ ವಿಲಿಯರ್ಸ್ 23 ವರ್ಷದ ಯುವ ಆಟಗಾರನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ಪ್ರತಿಯೊಬ್ಬ ಯುವ ಕ್ರಿಕೆಟಿಗ ಐಪಿಎಲ್ ಸಂದರ್ಭದಲ್ಲಿ ಲೆಜೆಂಡ್ಗಳಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕ್ರಿಸ್ ಗೇಲ್ ಅವರಂತಹ ಕ್ರಿಕೆಟಿಗರ ಜೊತೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಆದರೆ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿಡಿ ವಿಲಿಯರ್ಸ್ ಆಸ್ಟ್ರೇಲಿಯಾದ 23 ವರ್ಷದ ಯುವ ಆಟಗಾರ ಜೋಶ್ ಫಿಲಿಪ್ಪೆ ಅವರಲ್ಲಿ ತಮ್ಮನ್ನು ತಾವು ಕಾಣುವುದಾಗಿ ತಿಳಿಸಿದ್ದಾರೆ.
ಆರ್ಸಿಬಿಯ ಅಫೀಶಿಯಲ್ ಆ್ಯಪ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಅವರು, ಮೊದಲ ಐಪಿಎಲ್ ಟ್ರೋಫಿ ಎದುರು ನೋಡುತ್ತಿರುವ ಆರ್ಸಿಬಿ ತಂಡದಲ್ಲಿ ಯುವ ಆಟಗಾರನ ಸಾಮರ್ಥ್ಯ ನೋಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
"ಈ ಆವೃತ್ತಿಗಳಲ್ಲಿ ನಾವು ಕೇವಲ ಯಾವುದೇ ತಂಡವನ್ನು ಮಣಿಸುವಂತಹ ಆಟಗಾರರನ್ನು ಹೊಂದಲಿದ್ದೇವೆ. ನಾವು ಮೊಯಿನ್ ಅಲಿ, ಫಿಂಚ್, ಜಂಪಾ ಮತ್ತು ಜೋಸ್ ಫಿಲಿಪ್ಪೆಯಂತಹ ಆಟಗಾರರನ್ನು ಹೊಂದಿದ್ದೇವೆ. ನಾನು ಜೋಶ್ ಅವರನ್ನು ಸಂಪರ್ಕಿಸಲು ಎದುರು ನೋಡುತ್ತಿದ್ದೇನೆ. ಅವರ ಆಟದಲ್ಲಿ ನಾನು ಯುವ ಆಟಗಾರನಾಗಿದ್ದಾಗ ಇದ್ದ ಕೆಲ ಹೋಲಿಕೆಗಳನ್ನು ನೋಡುತ್ತೇನೆ. ಹೊಸ ನಾಲ್ಕು ಆಟಗಾರರು ನಮ್ಮ ತಂಡ ಸೇರಿಕೊಳ್ಳಲಿರುವುದು ವಿಶೇಷ ವಾತಾವರಣವಾಗಲಿದೆ ಎಂದಿದ್ದಾರೆ.
ಜೋಶ್ ಬಗ್ಗೆ ನಾನು ಬಹಳ ಉತ್ಸುಕನಾಗಿದ್ದೇನೆ. ಅವರು ಸಿಡ್ನಿ ಸಿಕ್ಸರ್ಗಾಗಿ ಆಡುವುದನ್ನು ನೋಡಿದ್ದೇನೆ. ಹೊಸ ಚೆಂಡಿನಲ್ಲಿ ಅವರ ಬ್ಯಾಟಿಂಗ್ ಹಾಗೂ ಆತ ಒಬ್ಬ ಪ್ರತಿಭಾವಂತ ಎಂದು ಗಿಲ್ಕ್ರಿಸ್ಟ್ ಹೇಳುವುದನ್ನು ನಾನು ಕೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.
2019ರ ಹರಾಜಿನಲ್ಲಿ ಜೋಶ್ ಫಿಲಿಪ್ಪೆಯನ್ನು ಆರ್ಸಿಬಿ 20 ಲಕ್ಷಕ್ಕೆ ಖರೀದಿಸಿದೆ. ಆತನಿಗೆ ಆಡುವ 11ರ ಬಳಗದಲ್ಲಿ ಹೆಚ್ಚು ಅವಕಾಶ ಸಿಗದಿದ್ದರೂ ತಂಡದಲ್ಲಿ ಹೆಚ್ಚುವರಿ ವಿಕೆಟ್ ಕೀಪರ್ಗಾಗಿ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅವರು ಕಳೆದ ವರ್ಷದ ಬಿಗ್ಬ್ಯಾಶ್ ಲೀಗ್ನಲ್ಲಿ 16 ಪಂದ್ಯಗಳಿಂದ 5 ಅರ್ಧಶತಕದ ನೆರವಿನಿಂದ 487 ರನ್ಗಳಿಸಿ 3ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.