ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರಂಥ ಮಹಾನ್ ಕ್ರಿಕೆಟಿಗರನ್ನು ಬುಕ್ಕಿಗಳು ಎಂದಿಗೂ ಭೇಟಿ ಮಾಡುವುದಿಲ್ಲ. ಇದರಿಂದ ಸಮಯ ವ್ಯರ್ಥ ಎಂಬುದು ಅವರಿಗೆ ತಿಳಿದಿದೆ. ಅದಕ್ಕಾಗಿ ಎಲ್ಲಾ ಯುವ ಕ್ರಿಕೆಟಿಗರು ಧೋನಿ,ಕೊಹ್ಲಿಯಂತಾಗಬೇಕು ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಅಜಿತ್ ಸಿಂಗ್ ಯುವ ಕ್ರಿಕೆಟಿಗರಿಗೆ ಕಿವಿಮಾತು ಹೇಳಿದ್ದಾರೆ.
'ಜಂಟಲ್ಮನ್ಸ್ ಗೇಮ್' ಎಂಬ ಹಿರಿಮೆ ಇರುವ ಕ್ರಿಕೆಟ್ನಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ ಭೂತ ತಳಕು ಹಾಕಿಕೊಂಡಿದೆ. ಮೊನ್ನೆ ತಮಿಳುನಾಡು ಪ್ರೀಮಿಯರ್ ಲೀಗ್, ನಿನ್ನೆ ಮಹಿಳಾ ಕ್ರಿಕೆಟರ್ ನೀಡಿರುವ ದೂರು ಉಲ್ಲೇಖಿಸಿ ಅಜಿತ್ ಸಿಂಗ್ ಮಾತನಾಡಿದ್ದಾರೆ.
ಮ್ಯಾಚ್ ಫಿಕ್ಸಿಂಗ್ನಂತಹ ಜಾಲಕ್ಕೆ ಯುವ ಆಟಗಾರರು, ಕ್ರಿಕೆಟ್ನಲ್ಲಿ ಯಶಸ್ಸು ಸಾಧಿಸಲಾಗದ ಆಟಗಾರರು ಸಿಲುಕಿಕೊಳ್ತಿದ್ದಾರೆ. ಕ್ರೀಡಾಳುಗಳು ಆಸೆ-ಆಮಿಷಗಳಿಗೆ ಒಳಗಾಗಬಾರದು. ಇದರಿಂದ ಸಿಗುವುದು ಒಂದು ಭಾಗದ ಹಣವಷ್ಟೇ. ಆದರೆ ಕಳೆದುಕೊಳ್ಳುವ ಗೌರವ ಇಡೀ ಜೀವಮಾನದ್ದಾಗಿರುತ್ತದೆ ಎಂದು ಎಚ್ಚರಿಸಿದ್ರು.
ಧೋನಿ-ಕೊಹ್ಲಿ ದುಡ್ಡಿನ ಹಿಂದೆ ಹೋಗಲಿಲ್ಲ. ಅವರು ಕ್ರಿಕೆಟ್ನಲ್ಲಿ ಪ್ರಸಿದ್ಧಿಯಾಗಲು ಬಯಸಿದರು. ಅವರು ಎಂದಿಗೂ ತಮ್ಮ ಖ್ಯಾತಿಯನ್ನು ದುಡ್ಡಿಗಾಗಿ ಕಳೆದುಕೊಳ್ಳಲು ಇಚ್ಚಿಸಲಿಲ್ಲ. ಇದೀಗ ಜಾಹೀರಾತಿನಲ್ಲಿ ರಾಯಭಾರಿಗಳಾಗಿ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಜೊತೆಗೆ ಅವರ ಖ್ಯಾತಿಯೂ ಎತ್ತರಕ್ಕೆ ಬೆಳೆದಿದೆ ಎಂದು ಅಜಿತ್ ಸಿಂಗ್ ಯುವ ಕ್ರಿಕೆಟಿಗರಿಗೆ ಸಲಹೆ ಕೊಟ್ಟರು.