ದುಬೈ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ-20 ವಿಶ್ವಕಪ್‌ನಲ್ಲಿ 15 ಸ್ಥಾನಗಳಿಗಾಗಿ 86 ತಂಡಗಳು ಹೋರಾಡಲಿವೆ ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.
13 ತಿಂಗಳುಗಳ ಕಾಲ 225 ಅರ್ಹತಾ ಪಂದ್ಯಗಳು ನಡೆಯಲಿವೆ ಎಂದು ಐಸಿಸಿ ಮಾಹಿತಿ ನೀಡಿದೆ. ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಪ್ರಾರಂಭವಾಗುವ ನಾಲ್ಕು ಹಂತದ ಅರ್ಹತಾ ಪ್ರಕ್ರಿಯೆಯ ಮೂಲಕ 15 ತಂಡಗಳನ್ನು ನಿರ್ಧರಿಸಲಾಗುವುದು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐದು ಪ್ರದೇಶಗಳಲ್ಲಿ ಹನ್ನೊಂದು ಪ್ರಾದೇಶಿಕ ಅರ್ಹತಾ ಪಂದ್ಯಾವಳಿಗಳನ್ನು 2021ಕ್ಕೆ ಮರು ನಿಗದಿಪಡಿಸಲಾಗಿದ್ದು, 2022 ರ ಟಿ-20 ಪಂದ್ಯಾವಳಿಗೆ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
ಮೊದಲ ಬಾರಿಗೆ ಹಂಗೇರಿ, ರೊಮೇನಿಯಾ ಮತ್ತು ಸೆರ್ಬಿಯಾ ತಂಡಗಳು ಟಿ-20 ವಿಶ್ವಕಪ್ ಅರ್ಹತೆಗಾಗಿ ಸ್ಪರ್ಧಿಸಲಿದ್ದು, ಫಿನ್‌ಲ್ಯಾಂಡ್ ಮೊದಲ ಬಾರಿಗೆ ಐಸಿಸಿ ಸ್ಪರ್ಧೆಗೆ ಆತಿಥ್ಯ ವಹಿಸುತ್ತಿದೆ. ಜಪಾನ್ ಕೂಡ ಪುರುಷರ ಟಿ-20 ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಯೋಜಿಸುತ್ತಿರುವುದು ಇದೇ ಮೊದಲು.
ಜಾಗತಿಕ ಅರ್ಹತಾ ಪಂದ್ಯಗಳಲ್ಲಿ 16 ಸ್ಥಾನಗಳು ಲಭ್ಯವಿದೆ. ಆಪೈಕಿ ಐಸಿಸಿ ಟಿ-20 ಚಾಂಪಿಯನ್ ಶಿಪ್ನಲ್ಲಿ ಅತ್ಯುನ್ನತ ಶ್ರೇಯಾಂಕಿತ 4 ತಂಡಗಳನ್ನು ಆಯ್ಯೆ ಮಾಡಲಾಗುತ್ತದೆ ಮತ್ತು 2021 ಐಸಿಸಿ ಟಿ-20 ವಿಶ್ವಕಪ್‌ನಿಂದ ನಾಲ್ಕು ಕಡಿಮೆ ಶ್ರೇಯಾಂಕಿತ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲಿಗೆ 8 ತಂಡಗಳು ಆಯ್ಕೆಯಾದಂತಾಗುತ್ತದೆ.
ಪ್ರಾದೇಶಿಕ ಅರ್ಹತಾ ತಂಡಗಳಿಂದ ಎಂಟು ತಂಡಗಳನ್ನು ಆಯ್ಕೆಮಾಡಲಾಗುತ್ತದೆ. ಅದರಂತೆ ಆಫ್ರಿಕಾ ಮತ್ತು ಇಎಪಿ(ಪೂರ್ವ ಏಷ್ಯಾ ಮತ್ತು ಪೆಸಿಫಿಕ್) ಅರ್ಹತಾ ತಂಡಗಳಿಂದ ತಲಾ ಒಂದು ತಂಡವನ್ನು ಆಯ್ಕೆಮಾಡಲಾಗುತ್ತದೆ. ಅಮೆರಿಕ ಮತ್ತು ಯುರೋಪ್ ಅರ್ಹತಾ ಪಂದ್ಯಗಳಿಂದ ತಲಾ ಎರಡು ತಂಡಗಳನ್ನು ಸೇರಿಕೊಳ್ಳಲಿವೆ. ಅಲ್ಲಿಗೆ 6 ಸ್ಥಾನಗಳು ಆಯ್ಕೆಯಾಗುತ್ತವೆ. ಉಳಿದ ಎರಡು ಸ್ಥಾನಗಳಿಗೆ ಏಷ್ಯಾ ಎ ಮತ್ತು ಏಷ್ಯಾ ಬಿ ತಂಡದಿಂದ ಒಂದೊಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಹೀಗೆ ಆಯ್ಕೆಯಾದ 16 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಅರ್ಹತಾ ಪಂದ್ಯ ನಡೆಸಲಾಗುತ್ತದೆ. ಆ ಪೈಕಿ ಪ್ರತೀ ಗುಂಪಿನ ಅಗ್ರ 2 ತಂಡಗಳು 2022ರ ಟಿ-20 ವಿಶ್ವಕಪ್ಗೆ ಅರ್ಹತೆ ಪಡೆಯಲಿವೆ.
ಈಗಾಗಲೆ ಆತಿಥೇಯ ಆಸ್ಟ್ರೇಲಿಯಾ ತಂಡದ ಜೊತೆಗೆ ಅಫಘಾನಿಸ್ತಾನ, ಭಾರತ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಸೇರಿದಂತೆ 8 ತಂಡಗಳು 2022ರ ಟಿ-20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿವೆ. ಇವುಗಳೊಂದಿಗೆ 2021ರ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ 9 ರಿಂದ 12 ನೇ ಸ್ಥಾನದಲ್ಲಿ ಉಳಿಯುವ ನಾಲ್ಕು ತಂಡಗಳು ಅರ್ಹತೆ ಪಡೆಯಲಿವೆ