ಸೌತಮ್ಟನ್: ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಂಪೈರ್ ತೀರ್ಪಿನಿಂದ ಅಸಮಾಧಾನಗೊಂಡು ಅತಿರೇಕವಾಗಿ ವರ್ತಿಸಿದ್ದಕ್ಕೆ ಐಸಿಸಿ, ಪಂದ್ಯ ಸಂಭಾವನೆಯ ಶೇ. 25 ರಷ್ಟನ್ನು ದಂಡವಾಗಿ ವಿಧಿಸಿದೆ.
ಅಫ್ಘಾನಿಸ್ತಾನದ ವಿರುದ್ಧ ಪಂದ್ಯದ 29ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಬುಮ್ರಾ ಬೌಲಿಂಗ್ನಲ್ಲಿ ರಹ್ಮತ್ ಶಾ ವಿರುದ್ಧ ಭಾರತೀಯ ಆಟಗಾರರು ಲೆಗ್ಬೈಗೆ ಮನವಿ ಮಾಡಿದ್ದರು. ಅಂಪೈರ್ ಅಲೀಮ್ ದರ್ ಔಟ್ ನೀಡದಿದ್ದಾಗ ಕೊಹ್ಲಿ ಡಿಆರ್‌ಎಸ್ ಮೊರೆ ಹೋದರು. ಥರ್ಡ್ ಅಂಪೈರ್, ಬಾಲ್ ಲೈನ್‌ನಿಂದ ಹೊರಗಿದ್ದರಿಂದ ಅಂಪೈರ್ ತೀರ್ಪು ಫೈನಲ್ ಆಯಿತು. ಭಾರತ ತಂಡ ರಿವ್ಯೂ ಅವಕಾಶ ಕಳೆದುಕೊಂಡಿತು.
ಆದರೆ ಟಿವಿಯಲ್ಲಿ ಬುಮ್ರಾ ಎಸೆದ ಬಾಲ್ ಲೈನ್ಗೆ ತಾಗಿತ್ತು. ಇದನ್ನು ಗಮನಿಸಿದ ಕೊಹ್ಲಿ ಅಂಪೈರ್ ಜೊತೆ ಬಾಲ್ ಲೈನ್‌ನಿಂದ ಹೊರಗೆ ಹೋಗಿಲ್ಲ ಎಂದು ವಾಗ್ವಾದ ನಡೆಸಿದ್ದರು. ಮೈದಾನದಲ್ಲಿ ಅಂಪೈರ್ ವಿರುದ್ಧ ಅನುಚಿತವಾಗಿ ವರ್ತಿಸಿ ಐಸಿಸಿ 2016 ತಿದ್ದಪಡಿ ನಿಯಮದ ಲೆವೆಲ್ 1ನ್ನು ಉಲ್ಲಂಘಿಸಿದ ಆರೋಪದ ಮೇಲೆ ರೆಫ್ರಿ ಕ್ರಿಸ್ಬ್ರಾಡ್ ಕೊಹ್ಲಿಗೆ ಪಂದ್ಯ ಸಂಭಾವನೆಯ ಶೇ 25ರಷ್ಟನ್ನು ದಂಡ ವಿಧಿಸಿದ್ದಾರೆ.
ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಅಗ್ರೆಸ್ಸಿವ್ ಆಗಿ ಕಾಣಿಸಿಕೊಂಡಿದ್ದರು. ಮೈದಾನದಲ್ಲಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಎಂದೂ ಹಿಂಜರಿಯದ ಕೊಹ್ಲಿ ಡಿಆರ್‌ಎಸ್ ಮನವಿ ತಪ್ಪಿದ್ದಾಗ ಅಂಪೈರ್ ಮುಂದೆಯೇ ಕೈಜೋಡಿಸಿ ತೀರ್ಪನ್ನು ಬದಲಾಯಿಸಿಕೊಳ್ಳಲು ಮನವಿ ಮಾಡಿದ್ದರು.