ಲಂಡನ್: ಆಸೀಸ್ ವಿರುದ್ಧದ ಸೋಲು ನಮ್ಮ ಆತ್ಮಬಲ ಕುಗ್ಗಿಸಿಲ್ಲ, ಮುಂದಿನ ಎರಡು ಪಂದ್ಯಗಳಲ್ಲಿ ಗೆಲವು ಸಾಧಿಸಿ ಸೆಮಿಫೈನಲ್ ಪ್ರವೇಶಿಸುತ್ತೇವೆ ಎಂದು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ತಿಳಿಸಿದ್ದಾರೆ.
ಮಂಗಳವಾರ ಲಾರ್ಡ್ಸ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 64 ರನ್ಗಳ ಹೀನಾಯ ಸೋಲನುಭವಿಸಿತ್ತು. ಈ ಸೋಲಿನ ಮೂಲಕ ಸೆಮೀಸ್ ಹಾದಿಯನ್ನು ಕಠಿಣಗೊಳಿಸಿಕೊಂಡಿತ್ತು. ಆದರೆ, ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಇಯಾನ್ ಮಾರ್ಗನ್ ಆಸ್ಟ್ರೇಲಿಯಾ ವಿರುದ್ಧದ ಸೋಲು ನಮಗೆ ಪಾಠವಾಗಿದೆ. ಮುಂದಿನ ಪಂದ್ಯಗಳಲ್ಲಿ ಹೇಗೆ ಆಡಬೇಕೆಂಬುದನ್ನು ಈಗಿನಿಂದಲೇ ಆಲೋಚಿಸುತ್ತಿದ್ದೇವೆ. ನಾವು 2 ಪಂದ್ಯಗಳಲ್ಲೂ ಗೆಲ್ಲುತ್ತೇವೆ. ಖಂಡಿತ ಸೆಮಿಫೈನಲ್ ಪ್ರವೇಶಿಸುತ್ತೇವೆ ಎಂದು ಮಾರ್ಗನ್ ತಿಳಿಸಿದ್ದಾರೆ.
"ಭಾರತ ಬಲಿಷ್ಠ ತಂಡ ಎಂಬುದು ನಮಗೆ ಗೊತ್ತಿದೆ. ನಮ್ಮ ತಂಡದಲ್ಲಿ ವಿಶ್ವಕಪ್ ಆರಂಭದಲ್ಲಿದ್ದ ಆತ್ಮವಿಶ್ವಾಸ ಈಗಿಲ್ಲ, ಆದರೆ, ಮುಂದಿನ ಪಂದ್ಯಗಳಲ್ಲಿ ನಮ್ಮ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು, ತಂಡದಲ್ಲಿ ಚೈತನ್ಯ ತುಂಬಬೇಕಿದೆ. ಭಾನುವಾರ ಭಾರತ ತಂಡವನ್ನು ಎದುರಿಸುವುದು ನಿಜಕ್ಕೂ ನಮಗೆ ದೊಡ್ಡ ಸವಾಲಾಗಲಿದೆ. ನಾವು ಒಂದು ಪಂದ್ಯ ಸೋತರೆ ಮುಂದಿನ ಪಂದ್ಯದಲ್ಲಿ ಪುಟಿದೇಳುವುದನ್ನು ರೂಢಿಸಿಕೊಂಡಿದ್ದೇವೆ" ಎಂದಿರುವ ಮಾರ್ಗನ್ ಭಾರತದ ವಿರುದ್ಧದ ಪಂದ್ಯಕ್ಕೆ ತಾವೂ ಸಿದ್ದ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಆಸೀಸ್ ವಿರುದ್ಧದ ಪಂದ್ಯದ ಸೋಲಿಗೆ ತಂಡದ ಬೌಲರ್ಗಳು ಹೆಚ್ಚು ಶಾರ್ಟ್ಬಾಲ್ ಪ್ರಯೋಗಿಸಿದರು, ಇದನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡ ಫಿಂಚ್ ಅತ್ಯುತ್ತಮವಾಗಿ ಬ್ಯಾಟ್ ಬೀಸಿದರು ಎಂದು ಮಾರ್ಗನ್ ಹೇಳಿದರು.
ಒಟ್ಟಿನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಇಂಗ್ಲೆಂಡ್ ಸೆಮಿಫೈನಲ್ ಕನಸು ನನಸಾಗಬೇಕೆಂದರೆ ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದೆ. ಆದರೆ ಭಾರತ ತಂಡ ಈಗಾಗಲೇ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದ್ದು, ಭಾನುವಾರದ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿದೆ.