ನವದೆಹಲಿ: ಟೆಸ್ಟ್ ಕ್ರಿಕೆಟ್ ಜನ್ಮ ತಾಳಿ ಇವತ್ತಿಗೆ 142 ವರ್ಷ. ಮಾರ್ಚ್ 15, 1877ರಲ್ಲಿ ವಿಶ್ವದ ಎರಡು ಬದ್ಧವೈರಿ ತಂಡಗಳು ಮೊದಲ ಟೆಸ್ಟ್ ಪಂದ್ಯದಲ್ಲಿ ಎದುರುಬದುರಾಗಿದ್ದವು. ಹೊಡಿಬಡಿ.. ಧಾಮ್‌ಧೂಮ್ ಅನ್ನೋ ರಂಗಬಿರಂಗಿ ಟಿ-20 ಆಟದ ಮಧ್ಯೆ ಐದು ದಿನದ ಟೆಸ್ಟ್ ಪಂದ್ಯದ ಬಗೆಗಿನ ಜಿಜ್ಞಾಸೆ ಹಿಂದಿಗಿಂತ ಈಗ ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ, ಟೆಸ್ಟ್ ಇತಿಹಾಸ ಕೆದಕಿದಾಗ ಕೆಲ ಅಚ್ಚರಿಯ ಸಂಗತಿ ತೆರೆದುಕೊಳ್ಳುತ್ತವೆ.
ಆಸೀಸ್-ಆಂಗ್ಲರ ಮಧ್ಯೆ ಮೊದಲ ಟೆಸ್ಟ್ ಪಂದ್ಯ :
ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಾರ್ಚ್ 15, 1877ರಲ್ಲಿ ಮೊದಲ ಬಾರಿಗೆ ಆಸೀಸ್ ಮತ್ತು ಇಂಗ್ಲೆಂಡ್ ತಂಡಗಳು ಟೆಸ್ಟ್ ಪಂದ್ಯ ಆಡಿದ್ದವು. ನಾಲ್ಕೇ ದಿನಕ್ಕೆ ಆಂಗ್ಲರನ್ನ ಮಣಿಸಿದ್ದ ಆಸ್ಟ್ರೇಲಿಯಾ ಮಾರ್ಚ್ 19ರಂದು 45 ರನ್‌ಗಳಿಂದ ಮೊದಲ ಟೆಸ್ಟ್ ಪಂದ್ಯ ಗೆದ್ದು ದಾಖಲೆ ನಿರ್ಮಿಸಿತ್ತು. ವಿಶೇಷ ಅಂದ್ರೇ ಮಾರ್ಚ್ 18ರಂದು ಒಂದು ದಿನ ವಿಶ್ರಾಂತಿ ನೀಡಲಾಗಿತ್ತಂತೆ. ಆಸೀಸ್‌ನ ಚಾರ್ಲ್ಸ್ ಬನ್ನೇರ್‌ಮನ್ ಟೆಸ್ಟ್‌ನಲ್ಲಿ ಮೊದಲ ರನ್ ಗಳಿಸಿದ್ದರು. ಹಾಗೇ ಜೆಂಟ್ಲ್‌ಮೆನ್ ಕ್ರಿಕೆಟ್‌ನ ಮೊದಲ ಸೆಂಚುರಿ ಕೂಡ ಸಿಡಿಸಿದ್ದರು. ಎಲ್ಲ ಅಡೆತಡೆಗಳ ಮಧ್ಯೆ ಇಂಗ್ಲೆಂಡ್ ಕೂಡ ಒಳ್ಳೇ ಆಟ ಪ್ರದರ್ಶಿಸಿತ್ತು.
ಅವತ್ತು ಪಂದ್ಯ ಮಧ್ಯಾಹ್ನ 1 ಗಂಟೆ 5 ನಿಮಿಷಕ್ಕೆ ಶುರುವಾಗಿತ್ತು. ಮೊದಲು ಆಸೀಸ್ ಪರ ಬ್ಯಾಟ್ ಮಾಡಿದ್ದ ಬನ್ನೇರ್‌ಮೆನ್, ಇಂಗ್ಲೆಂಡ್‌ನ ಆಲ್‌ಫ್ರೆಡ್ ಶಾವ್ ಬಾಲ್‌ನಲ್ಲಿ ಮೊದಲ ರನ್ ಗಳಿಸಿದ್ದರು. ಬಲಗೈನ ಬೆರಳಿಗೆ ಗಾಯ ಮಾಡಿಕೊಂಡು ರಿಟೈರಿಂಗ್ ಹರ್ಟ್ ಆಗುವ ಮೊದಲೇ 165ರನ್ ಸೇರಿಸಿದ್ದರು ಬನ್ನೇರ್‌ಮೆನ್. ಆದರೆ, ಉಳಿದ ಆಟಗಾರರು ಬೇಗ ವಿಕೆಟ್ ಒಪ್ಪಿಸಿದ್ದರು. ಆಸೀಸ್ ಮೊದಲ ಇನ್ನಿಂಗ್ಸ್‌ಗೆ 245 ರನ್ ಪೇರಿಸಿತ್ತು. ಇಂಗ್ಲೆಂಡ್‌ನ ಸೌತರ್‌ಟನ್ 49 ವರ್ಷ 119 ದಿನದ ಬಳಿಕ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಈಗಲೂ ಆ ದಾಖಲೆ ಹಾಗೇ ಇದೆ.
ಆಂಗ್ಲರ ಪರ ಓಪನರ್ ಹ್ಯಾರಿ ಜುಪ್ 241 ಬಾಲ್‌ಗೆ 63ರನ್ ಗಳಿಸಿದ್ದರು. ಆದರೆ, ಇನ್ನುಳಿದ ಆಂಗ್ಲ ಬ್ಯಾಟ್ಸ್‌ಮೆನ್‌ಗಳು ಆಸೀಸ್ ಒಡ್ಡಿದ್ದ ಟಾರ್ಗೆಟ್‌ಗೆ ಪ್ರತ್ಯುತ್ತರವಾಗಿ 196 ರನ್‌ಗಳಿಸಿದ್ದರು. 78 ರನ್ ನೀಡಿ 5 ವಿಕೆಟ್ ಗಳಿಸಿದ್ದ ಬಿಲ್ಲಿ ಮಿಡ್‌ವಿಂಟರ್ ಆಸೀಸ್ ಪರ ಒಳ್ಳೇ ಬೌಲಿಂಗ್ ದಾಳಿ ಮಾಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ 49ರನ್ ಲೀಡ್ ಪಡೆದಿತ್ತು. ಆದರೆ, ಆಸೀಸ್ 2ನೇ ಇನ್ನಿಂಗ್ಸ್‌ನಲ್ಲಿ 104ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. 38 ರನ್ ನೀಡಿ 5 ವಿಕೆಟ್ ಕಿತ್ತ ಇಂಗ್ಲೆಂಡ್‌ನ ಶಾವ್ ಪಂದ್ಯವನ್ನ ರೋಚಕ ಹಂತಕ್ಕೆ ತಂದಿದ್ದರು. ಗೆಲ್ಲಲು 153 ರನ್ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 108 ರನ್‌ಗಳಿಸಲಷ್ಟೇ ಶಕ್ತವಾಗಿತ್ತು.
ಆಸೀಸ್‌ನ ಟಾಮ್ ಕೆಂಡಾಲ್ 55 ರನ್ ನೀಡಿ ಆಂಗ್ಲರ 7 ವಿಕೆಟ್ ಕಬಳಿಸಿದ್ದರು. ಕ್ರಿಕೆಟ್ ಜನಕ ಇಂಗ್ಲೆಂಡ್‌ಗೆ ಸೋಲಿನ ರುಚಿ ಉಣಿಸಿದ್ದರು. ಆ ಪಂದ್ಯ ನೋಡಲು 12 ಸಾವಿರ ಪ್ರೇಕ್ಷಕರು ಸೇರಿದ್ದರು. ಇದಾದ ಬಳಿಕ 2ನೇ ಪಂದ್ಯವನ್ನ ಆಂಗ್ಲರು ಗೆದ್ದಿದ್ದರಿಂದಾಗಿ ಸರಣಿ ಸಮಬಲವಾಗಿತ್ತು. 1882ರ ಬಳಿಕ ಆ್ಯಶಸ್ ಟೆಸ್ಟ್ ಸರಣಿ ಶುರುವಾಗಿ ಈಗಲೂ ಆಸೀಸ್ ಮತ್ತು ಆಂಗ್ಲರ ತಂಡಗಳು ಬದ್ಧವೈರಿಗಳೆಂದೇ ಗುರುತಿಸಿಕೊಂಡಿವೆ. ಆ ಬಳಿಕ ಅಮೆರಿಕಾ, ಕೆನಡಾ ಮತ್ತು ನ್ಯೂಜಿಲೆಂಡ್ ತಂಡಗಳು ಟೆಸ್ಟ್ ಕ್ರಿಕೆಟ್ ಪದಾರ್ಪಣೆಗೆ ಯತ್ನಿಸಿದ್ದವು. ಆದರೆ, ಕಿವೀಸ್ ಮಾತ್ರ ಟೆಸ್ಟ್ ಆಡುವ ಅರ್ಹತೆ ಗಳಿಸಿಕೊಂಡಿದೆ.
142 ವರ್ಷದಲ್ಲಿ ಆಡಿದ ಟೆಸ್ಟ್ ಪಂದ್ಯಗಳು ಎಷ್ಟು ?
ಮಾರ್ಚ್ 15, 1877 ಅವತ್ತು ಗುರುವಾರ, ಮೆಲ್ಬೋರ್ನ್‌ನಲ್ಲಿ ಆಸೀಸ್-ಆಂಗ್ಲರು ಆಡಿದ್ದೇ ಮೊದಲ ಟೆಸ್ಟ್ ಪಂದ್ಯ. ಈಗ ಆಪ್ಘಾನಿಸ್ತಾನ್ ಮತ್ತು ಐರ್ಲೆಂಡ್ ತಂಡಗಳ ಮಧ್ಯೆ ನಡಿಯುತ್ತಿರುವುದು 2351ನೇ ಟೆಸ್ಟ್ ಪಂದ್ಯ. ಈವರೆಗೂ1586 ಟೆಸ್ಟ್ ಪಂದ್ಯ ಗೆಲುವು ಕಂಡಿವೆ. 2 ಟೈ ಆಗಿದ್ದರೆ, 762 ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ 2 ಕೋಟಿ 32 ಲಕ್ಷ 7 ಸಾವಿರದಾ 684 ರನ್ ದಾಖಲಾಗಿವೆ. 72, 541 ಟೆಸ್ಟ್ ವಿಕೆಟ್‌ಗಳು ಉರುಳಿವೆ.
48 ಲಕ್ಷ 62 ಸಾವಿರದಾ 607 ಬಾಲ್‌ಗಳನ್ನ ಎಸೆಯಲಾಗಿದೆ. 4146 ಸೆಂಚುರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮೆನ್‌ಗಳಿಂದ ಸಿಡಿದಿವೆ. ಈವರೆಗೂ 10, 067 ಅರ್ಧ ಶತಕಗಳು ದಾಖಲಾಗಿವೆ. 2,997 ಐದು ವಿಕೆಟ್‌ಗಳು ಒಂದೇ ಪಂದ್ಯದಲ್ಲಿ ಉರುಳಿವೆ. 443 ಬಾರಿ 10 ವಿಕೆಟ್‌ಗಳನ್ನ ಬಾಲರ್‌ಗಳು ಉರುಳಿಸಿದ್ದಾರೆ. ಆದರೆ, ಈಗ ಟೆಸ್ಟ್ ಕ್ರಿಕೆಟ್ ಎಷ್ಟು ಪ್ರಸ್ತುತ ಅನ್ನೋ ಪ್ರಶ್ನೆ ಕೇಳಿ ಬರುತ್ತೆ. ಈಗಲೂ ಬೌಲರ್ ಮತ್ತು ಬ್ಯಾಟ್ಸ್‌ಮೆನ್ ನಿಜ ಕೌಶಲ್ಯ ಕಾಣಬೇಕಿದ್ರೇ ಟೆಸ್ಟ್ ಪಂದ್ಯವೇ ಬೆಸ್ಟ್ ಅಂತಾ ಸಾಕಷ್ಟು ವಿಶ್ವದರ್ಜೆಯ ಅನುಭವಿ ಆಟಗಾರರೇ ಹೇಳುತ್ತಾರೆ.