ಹೈದರಾಬಾದ್: 365 ದಿನಗಳಲ್ಲಿ ಜಂಟಲ್‌ಮ್ಯಾನ್ ಗೇಮ್ ಎಂದು ಕರೆಸಿಕೊಳ್ಳುವ ಕ್ರಿಕೆಟ್ ತನ್ನ ಮೂರು ಮಾದರಿಯಲ್ಲಿ ಅನೇಕ ಬದಲಾವಣೆಗೆ ಒಳಗಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಯಿಂದ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್ ಆಡಿಸಿದರೆ, 2023ರಲ್ಲಿ ಚುಟುಕು ಕ್ರಿಕೆಟ್ ಇನ್ನಷ್ಟೂ ಸಂಕೀರ್ಣವಾಗಿ ಟಿ10 ರೂಪವನ್ನು ಪಡೆದುಕೊಂಡಿತು. ಇದಲ್ಲದೇ ಕ್ರಿಕೆಟ್ನಿಂದ ದೂರ ಸರಿದಿದ್ದ ರಾಷ್ಟ್ರಗಳು ಕ್ರಿಕೆಟ್ನ್ನು ಮೆಚ್ಚಿಕೊಂಡವು. ಹಾಗೇ ಒಲಂಪಿಕ್ಸ್ನಲ್ಲಿ ಮತ್ತೆ ಚೆಂಡು - ದಾಂಡಿನ ಆಟಕ್ಕೆ ಅನುಮತಿ ಸಿಕ್ಕಿತು.
2023ರಲ್ಲಿ ಭಾರತ ಎರಡು ಐಸಿಸಿ ಟ್ರೋಫಿಗಳ ಫೈನಲ್ ಆಡಿ ರನ್ನರ್ ಅಪ್ ಆಗಿ ಹೊರಹೊಮ್ಮಿತು. ವರ್ಷದ ನಡುವಿನಲ್ಲಿ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ್ನು ಎರಡನೇ ಬಾರಿಗೆ ಪ್ರವೇಶಿಸಿತ್ತು. ಇಂಗ್ಲೆಂಡ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಸೋತು ಐಸಿಸಿ ಟ್ರೋಫಿ ಕೈಚೆಲ್ಲಿದರೆ, ತವರಿನಲ್ಲಿ ಅಕ್ಟೋಬರ್ - ನವೆಂಬರ್ ಮಾಸದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲೂ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು.
ಏಕದಿನ ವಿಶ್ವಕಪ್ನ ಸೋಲು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಹೃದಯವನ್ನೇ ಒಡೆಯಿತು ಎಂದರೆ ತಪ್ಪಾಗದು. 2011ರಲ್ಲಿ ಭಾರತ ತವರಿನಲ್ಲಿ ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದ ಕ್ಷಣ ಮತ್ತೆ ಮರುಕಳಿಸುತ್ತದೆ ಎಂದು ಕಾದಿದ್ದ ಜನ ನಿರಾಸೆಯಲ್ಲಿ ತೇಲುವಂತೆ ಮಾಡಿತು. 10ಕ್ಕೆ 10 ಪಂದ್ಯ ಗೆದ್ದಿದ್ದ ತಂಡ 11ನೇ ಪಂದ್ಯದಲ್ಲಿ ಸೋಲುಂಡು 9ನೇ ಐಸಿಸಿ ಟ್ರೋಫಿಯಿಂದ ವಂಚಿತವಾಯಿತು. ಇದು ಭಾರತಕ್ಕೆ ಕಹಿ ಘಟನೆಯಾಗಿದೆ.
ಅಮೆರಿಕದಲ್ಲಿ ವಿಶ್ವಕಪ್: ಕಾಲ್ಚೆಂಡಿನ ಆಟಕ್ಕೆ ಮರುಳಾಗಿದ್ದ ದೇಶಗಳು ಕ್ರಿಕೆಟ್ ಅಪ್ಪಿಕೊಳ್ಳಲು ಆರಂಭಿಸಿದ್ದು, ಈ ವರ್ಷದಿಂದ. ಜಾಗತಿಕವಾಗಿ ಕ್ರಿಕೆಟ್ಗೆ ಖಾತಿ ಹೆಚ್ಚಾಗುತ್ತಿದ್ದು , ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಾನ್ಯತೆಗೆ ಒಳಪಡುತ್ತಿದೆ. ಇಟಲಿ ಮತ್ತು ಜರ್ಮನಿಯಂತಹ ಫುಟ್ಬಾಲ್ ರಾಷ್ಟ್ರಗಳು, ಚೀನಾ ಮತ್ತು ಅಮೆರಿಕದಂತಹ ಒಲಿಂಪಿಕ್ಸ್ ದೇಶಗಳು ಕ್ರಿಕೆಟ್ ಕಡೆ ಒಲವು ತೋರುತ್ತಿದೆ. 2024ರ ಟಿ20 ವಿಶ್ವಕಪ್ಗೆ ಅಮೆರಿಕ, ವೆಸ್ಟ್ ಇಂಡೀಸ್ ಜೊತೆಗೆ ಜಂಟಿಯಾಗಿ ಆಯೋಜಿಸುತ್ತಿದೆ. ಇದಲ್ಲದೇ ಮುಂದಿನ ಒಲಂಪಿಕ್ಸ್ನಲ್ಲಿ ಕ್ರಿಕೆಟ್ ಅನ್ನು ಆಡಿಸಲಾಗುವುದು. ಇದಕ್ಕೆ ಒಲಂಪಿಕ್ಸ್ ಸಮಿತಿಯ ಒಪ್ಪಿಗೆಯೂ ದೊರೆತಿದೆ.
ಚೀನಾದಲ್ಲೂ ಕ್ರಿಕೆಟ್ ಒಲವು: ಕಮ್ಯೂನಿಸ್ಟ್ ರಾಷ್ಟ್ರ ಚೀನಾವು ಕ್ರಿಕೆಟ್ ಅತ್ತ ಒಲವು ತೋರುತ್ತಿದೆ. 2004 ರಿಂದಲೇ ಸಾಂಸ್ಥಿಕವಾಗಿ ಕ್ರಿಕೆಟ್ ಆರಂಭವಾದರೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. 2004 ರಿಂದ ಚೈನೀಸ್ ಕ್ರಿಕೆಟ್ ಅಸೋಸಿಯೇಷನ್ ಅಸ್ತಿತ್ವದಲ್ಲಿದೆ. ಅಲ್ಲಿನ 21 ವಿಶ್ವವಿದ್ಯಾನಿಲಯಗಳ ಪಠ್ಯಕ್ರಮದಲ್ಲಿ ಕ್ರಿಕೆಟ್ ಅಧಿಕೃತ ಕ್ರೀಡೆಯಾಗಿದೆ. ಮತ್ತು ಇದು ಮಹಿಳಾ ಕ್ರಿಕೆಟ್ ತಂಡ ಜಾಗತಿಕ ಟಿ20 ಶ್ರೇಯಾಂಕದಲ್ಲಿ 26 ನೇ ಸ್ಥಾನದಲ್ಲಿದ್ದರೆ, ಪುರುಷರ ತಂಡ 86ನೇ ಸ್ಥಾನದಲ್ಲಿದೆ.
ಅಮೆರಿಕದಲ್ಲಿ ಎಮ್ಎಲ್ಸಿ: ಅಮೆರಿಕವೂ ಸಹ ಟಿ20 ಕ್ರಿಕೆಟ್ ಲೀಗ್ ಕ್ರೇಜ್ಗೆ ಮಾರುಹೋಯಿತು. ಮೇಜರ್ ಲೀಗ್ ಕ್ರಿಕೆಟ್ (MLC) ಅಮೆರಿಕದ ಪ್ರಥಮ ದರ್ಜೆ ವೃತ್ತಿಪರ ಕ್ರಿಕೆಟ್ ಜುಲೈ 2023ರಲ್ಲಿ ತನ್ನ ಉದ್ಘಾಟನಾ ಆವೃತ್ತಿಯನ್ನು ಕಂಡಿತು. ಸುನಿಲ್ ನರೈನ್, ಆರನ್ ಫಿಂಚ್, ಫಾಫ್ ಡ್ಯೂ ಪ್ಲೆಸಿಸ್ ಮತ್ತು ಕೀರಾನ್ ಪೊಲಾರ್ಡ್ ಅವರಂತಹ ಅಂತಾರಾಷ್ಟ್ರೀಯ ತಾರೆಗಳನ್ನು ಒಳಗೊಂಡಿರುವ ಆರು ನಗರ-ಆಧಾರಿತ ತಂಡಗಳ ಪಂದ್ಯಗಳು ನಡೆದವು.
ಐಸಿಸಿ ಅಡಿ ಒಲಂಪಿಕ್ಸ್: 2028ರ ಒಲಂಪಿಕ್ಸ್ನಲ್ಲಿ ಕ್ರಿಕೆಟ್ ಆಡಿಸುವುದಕ್ಕೆ ಅನುಮೋದನೆ ದೊರೆಯುತ್ತಿದ್ದಂತೆ ಐಸಿಸಿಯೂ ಇದನ್ನು ಸ್ವಾಗತಿಸಿದೆ. ಇದರಿಂದ ಕೆನಡಾವು ಕ್ರಿಕೆಟ್ ಕಡೆ ಒಲವು ತೋರುತ್ತಿದೆ. ಕೆನಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ.
ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಟೆಸ್ಟ್: ಭಾರತದ ಬಿಗು ಬೌಲಿಂಗ್ ದಾಳಿ, ಆಸೀಸ್ಗೆ 46 ರನ್ಗಳ ಮುನ್ನಡೆ