ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಕೊರೊನಾ ಕರಿನೆರಳು ಬಿದ್ದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಈಗಾಗಲೇ ಸೋಂಕು ಕಾಣಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಇಂದು ಬೆಂಗಳೂರು - ಕೋಲ್ಕತ್ತಾ ತಂಡಗಳ ನಡುವೆ ನಡೆಯಬೇಕಾಗಿದ್ದ ಪಂದ್ಯ ಮುಂದೂಡಿಕೆಯಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಾಗಿನಿಂದಲೂ ಇಲ್ಲಿಯವರೆಗೆ 7 ಪ್ಲೇಯರ್ಸ್ಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರ ಮಧ್ಯೆ ಐಪಿಎಲ್ನಲ್ಲಿ ಫೈನಲ್ ಸೇರಿದಂತೆ 31 ಪಂದ್ಯಗಳು ನಡೆಯಬೇಕಾಗಿದ್ದು, ನಾಲ್ಕು ನಗರಗಳಲ್ಲಿ ಆಯೋಜನೆಗೊಂಡಿವೆ.
ಅಹಮದಾಬಾದ್, ದೆಹಲಿ, ಬೆಂಗಳೂರು ಹಾಗೂ ಕೋಲ್ಕತ್ತಾದಲ್ಲಿ ಈ ಪಂದ್ಯಗಳು ನಡೆಯಲಿವೆ. ಆದರೆ, ಈ ನಗರಗಳಲ್ಲಿ ಕೊರೊನಾ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಬೆಂಗಳೂರಿನಲ್ಲಿ ನಿತ್ಯ 10 ಸಾವಿರಕ್ಕೂ ಅಧಿಕ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ದೆಹಲಿಯಲ್ಲಿ ಪ್ರತಿದಿನ 20 ಸಾವಿರ, ಅಹಮದಾಬಾದ್ ಹಾಗೂ ಕೋಲ್ಕತ್ತಾದಲ್ಲೂ 5 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿವೆ.
ಇದನ್ನೂ ಓದಿ: ಸಿಎಸ್ಕೆ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿಗೆ 2ನೇ ಟೆಸ್ಟ್ನಲ್ಲೂ ಪಾಸಿಟಿವ್
ಅಹಮದಾಬಾದ್ನಲ್ಲಿ ಫೈನಲ್ ಸೇರಿ 7 ಪಂದ್ಯಗಳು, ದೆಹಲಿಯಲ್ಲಿ 4 ಪಂದ್ಯ, ಬೆಂಗಳೂರಿನಲ್ಲಿ 10 ಪಂದ್ಯ ಹಾಗೂ ಕೋಲ್ಕತ್ತಾದಲ್ಲಿ 10 ಪಂದ್ಯ ನಡೆಯಬೇಕಾಗಿವೆ. ಆದರೆ, ಸದ್ಯ ಐಪಿಎಲ್ಗೂ ಕೊರೊನಾ ಲಗ್ಗೆ ಹಾಕಿರುವ ಕಾರಣ ಯಾವ ರೀತಿಯಲ್ಲಿ ಪಂದ್ಯಗಳನ್ನ ನಡೆಸಲಾಗುತ್ತದೆ ಎಂಬುದು ಇದೀಗ ಉದ್ಭವವಾಗಿರುವ ಪ್ರಶ್ನೆ. ಕಳೆದ ಕೆಲ ತಿಂಗಳ ಹಿಂದೆ ಆರಂಭಗೊಂಡಿದ್ದ ಪಾಕಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ಕೆಲ ಪ್ಲೇಯರ್ಸ್ಗೆ ಕೊರೊನಾ ಸೋಂಕು ದೃಢಗೊಂಡಿದ್ದ ಕಾರಣ, ಟೂರ್ನಿ ಮುಂದೂಡಿಕೆ ಮಾಡಲಾಗಿದೆ.
ಇನ್ನು ದೇಶದಲ್ಲಿ ನಿತ್ಯ ಲಕ್ಷಾಂತರ ಕೊರೊನಾ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಇದರ ಮಧ್ಯೆ ಐಪಿಎಲ್ ನಡೆಯುತ್ತಿದ್ದು, ಟೀಕೆಗೂ ಗುರಿಯಾಗಿದೆ.