ಶಿವಮೊಗ್ಗ: ಇಲ್ಲಿನ ಕೆಎಸ್‌ಸಿಎ ನವುಲೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ 19 ವರ್ಷದೊಳಗಿನ ಕೂಚ್ ಬೆಹರ್ ಟ್ರೋಫಿ ಕ್ರಿಕೆಟ್ ಫೈನಲ್‌ನ ಮೂರನೇ ದಿನದಾಟದಲ್ಲಿ ಕರ್ನಾಟಕ ತಂಡವು ಪ್ರಕಾರ್ ಚತುರ್ವೇದಿ ಅವರ ಅಮೋಘ ದ್ವಿಶತಕ, ಹರ್ಷಿಲ್ ಧರ್ಮಾನಿ ಶತಕ ಮತ್ತು ಎರಡನೇ ವಿಕೆಟ್‌ಗೆ 290 ರನ್‌ಗಳ ಜೊತೆಯಾಟದ ಫಲವಾಗಿ ಮುಂಬೈ ವಿರುದ್ಧ 6 ವಿಕೆಟ್ ನಷ್ಟಕ್ಕೆ 626 ರನ್ ಪೇರಿಸಿತು. ಬಿಸಿಸಿಐ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಈ ಪಂದ್ಯಾವಳಿ ಆಯೋಜಿಸಿದೆ.
ಮುಂಬೈ ವಿರುದ್ಧ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲ ದಿನ ಮುಂಬೈ 328 ರನ್ಗೆ 6 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಮುಂದುವರೆಸಿತು. ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಅವರ ಶತಕದಾಟದಿಂದ (145 ರನ್) ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 380 ರನ್ ಗಳಿಸಿ ಆಲೌಟ್ ಆಯಿತು. ಎರಡನೇ ದಿನದಂತ್ಯಕ್ಕೆ ಕರ್ನಾಟಕ 280 ರನ್ಗಳಿಗೆ ಒಂದು ವಿಕಿಟ್ ಕಳೆದುಕೊಂಡಿತ್ತು. ಮೂರನೇ ದಿನ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಕರ್ನಾಟಕ, ಪ್ರಕಾರ್ ಚತುರ್ವೇದಿ ದ್ವಿಶತಕ ಮತ್ತು ಹರ್ಷಿಲ್ ಧರ್ಮಾನಿ ಶತಕ ಮತ್ತು ಎರಡನೇ ವಿಕೆಟ್‌ಗೆ ಈ ಇಬ್ಬರು ಆಟಗಾರರ 290 ರನ್‌ಗಳ ಜೊತೆಯಾಟದಿಂದ ಕರ್ನಾಟಕ 6 ವಿಕೆಟ್ ಕಳೆದುಕೊಂಡು 626 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ 246 ರನ್ ಮುನ್ನಡೆ ಪಡೆಯಿತು.
ತಂಡದ ಸಂಕ್ಷಿಪ್ತ ಸ್ಕೋರ್ ವಿವರ: ಪ್ರಕಾರ್ ಚತುರ್ವೇದಿ 256 ರನ್, ಹಾರ್ದಿಕ್ ರಾಜ್ 5 ರನ್ ಗಳಿಸಿ ಕ್ರಿಸ್ನಲ್ಲಿದ್ದಾರೆ. ಇನ್ನುಳಿದಂತೆ, ಕಾರ್ತಿಕ್ ಎಸ್ 50, ಹರ್ಷಿತ್ ಧರ್ಮಾನಿ 169, ಕಾರ್ತಿಕೇಯ ಕೆ.ಪಿ 72, ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮರ್ಥ್ ದ್ರಾವಿಡ್ 22, ಧ್ರುವ ಪ್ರಭಾಕರ್ 3, ಧೀರಜ್ ಗೌಡ 7 ರನ್ ಗಳಿಸಿದ್ದಾರೆ.
ಕರ್ನಾಟಕ ಇಂದು ತನ್ನ ಆಟ ಮುಂದುವರೆಸಲಿದೆ. ಪ್ರಕಾರ್ ಚತುರ್ವೇದಿ 300 ರನ್ ಗಳಿಸಿದ ಬಳಿಕ ಮುಂಬೈಗೆ ಆಟವಾಡಲು ಅವಕಾಶ ನೀಡುವ ಸಾಧ್ಯತೆಗಳಿವೆ. ಇಂದು ಮಧ್ಯಾಹ್ನ ಕೆಎಸ್‌ಸಿಎಯಿಂದ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕೆಎಸ್‌ಸಿಎ ಅಧ್ಯಕ್ಷರು, ದೊಡ್ಡ ಗಣೇಶ್ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ.
ಇದನ್ನೂ ಓದಿ: ಜೈಸ್ವಾಲ್, ದುಬೆ ಅಬ್ಬರ; ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ, 2-0 ಸರಣಿ ಗೆಲುವು