ಭಾರತ ಕ್ರಿಕೆಟ್ ತಂಡದ ಚೈನಾಮನ್ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಇಂದು 28ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಕುಲದೀಪ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಪರ ಎರಡು ಬಾರಿ ಹ್ಯಾಟ್ರಿಕ್ ಪಡೆದ ಏಕೈಕ ಆಟಗಾರನಾಗಿದ್ದಾರೆ.
ಕುಲದೀಪ್ ಯಾದವ್ ಡಿಸೆಂಬರ್ 14, 1994ರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದರು. ಆರಂಭದಲ್ಲಿ ಕುಲದೀಪ್ ವೇಗದ ಬೌಲರ್ ಆಗಿದ್ದರು. ಆದರೆ ತಮ್ಮ ಕೋಚ್ ಸಲಹೆ ಮೇರೆಗೆ ಇವರು ಚೈನ್ಮ್ಯಾನ್ ಬೌಲರ್ರಾಗಿ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡರು.
ಅಂಡರ್-19 ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ಸಾಧನೆ:
ಕುಲದೀಪ್ 2014ರಲ್ಲಿ ನಡೆದ ಅಂಡರ್-19 ವಿಶ್ವಕಪ್‍ನಲ್ಲಿ ಸ್ಕಾಟ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಈ ಮೂಲಕ ಅಂಡರ್-19 ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಕೂಡ ಆಗಿದ್ದರು.
2017ರಲ್ಲಿ ಅಂತಾರಾಷ್ತ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ:
2017ರಂದು ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ 4ನೇ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು. ಅದೇ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಹಾಗೆಯೇ ಅದೇ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಟಿ-20 ಕ್ರಿಕೆಟ್ಗೂ ಪಾದಾರ್ಪಣೆ ಮಾಡಿದರು.
ಏಕದಿನ ಕ್ರಿಕೆಟ್ನಲ್ಲಿ ಎರಡು ಬಾರಿ ಹ್ಯಾಟ್ರಿಕ್:
ಕುಲದೀಪ್ ಅಂಡರ್-19 ವಿಶ್ವಕಪ್‍ನಲ್ಲಿ ಮಾತ್ರವಲ್ಲದೆ, ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ. 2017ರ ಸೆಪ್ಟೆಂಬರ್ 21ರಂದು ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ನಲ್ಲಿ ಅವರಿಗೆ ಹ್ಯಾಟ್ರಿಕ್ ವಿಕೆಟ್ ಲಭಿಸಿತ್ತು. ಆಗ ಭಾರತದ ಚೇತನ್ ಶರ್ಮಾ ಮತ್ತು ಕಪಿಲ್ ದೇವ್ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಇವರಾಗಿದ್ದರು.
ಬಳಿಕ 2019ರ ಡಿಸೆಂಬರ್ 18ರಂದು ವೆಸ್ಟ್ ಇಂಡೀಸ್ ವಿರುದ್ಧ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಎರಡನೇ ಬಾರಿಗೆ ಎರಡು ಹ್ಯಾಟ್ರಿಕ್ ಗಳಿಸಿದ ಭಾರತದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಇದೇ ವರ್ಷ ಸೆಪ್ಟೆಂಬರ್ನಲ್ಲಿ ಕುಲದೀಪ್ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಬಳಿಕ ಯಾವುದೇ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಮುಂದಿನ ಐಪಿಎಲ್ನಲ್ಲಿ ಅವಕಾಶ ಪಡೆದುಕೊಂಡು, ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವ ಸಿದ್ಧತೆಯಲ್ಲಿದ್ದಾರೆ.
ಇದನ್ನೂ ಓದಿ: ಒಂದೇ ಓವರ್ನಲ್ಲಿ 6 ವಿಕೆಟ್: ಪಾಕ್ ವಿರುದ್ಧ ಹೊಸ ಇತಿಹಾಸ ಬರೆದ ಭಾರತ ಮೂಲದ ಹರ್ಷಿತ್ ಸೇಠ್!