ಮುಂಬೈ: ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಹಿರಿಯ ಬ್ಯಾಟರ್ ಚೇತೇಶ್ವರ್ ಪೂಜಾರ ಮುಂಬರುವ ಕೌಂಟಿ ಚಾಂಪಿಯನ್ಶಿಪ್ ಮತ್ತು ರಾಯಲ್ ಲಂಡನ್ ವಂಡೇ ಕಪ್ನಲ್ಲಿ ಆಡಲು ಸಸೆಕ್ಸ್ ಕ್ಲಬ್ ಜೊತೆಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಪೂಜಾರ ಕಳಪೆ ಫಾರ್ಮ್ ಕಾರಣ ತವರಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಐಪಿಎಲ್ ವೇಳೆ ಭಾರತದಲ್ಲಿ ಯಾವುದೇ ಕ್ರಿಕೆಟ್ ಇಲ್ಲದಿರುವುದರಿಂದ ಇಂಗ್ಲೆಂಡ್ ಕೌಂಟಿ ತಂಡದಲ್ಲಿ ಆಡುವುದಕ್ಕೆ ಅವರು ಸಿದ್ಧರಾಗಿದ್ದಾರೆ.
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಬಲಿ ಆಟಗಾರನಾಗಿ ಪೂಜಾರರನ್ನು ಸಸೆಕ್ಸ್ ಕ್ಲಬ್ ವಿದೇಶಿ ಕ್ರಿಕೆಟಿಗನ ಸ್ಥಾನದಲ್ಲಿ ಒಪ್ಪಂದ ಮಾಡಿಕೊಂಡಿದೆ. ಹೆಡ್ ಅವರು ರಾಷ್ಟ್ರೀಯ ತಂಡದ ಕರ್ತವ್ಯ ಮತ್ತು ಅವರ ಸಂಗಾತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಒಪ್ಪಂದದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು.
2021ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಪೂಜಾರ ಮೆಗಾ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ. ಹಾಗಾಗಿ ಇದೀಗ ಕೌಂಟಿ ಕ್ರಿಕೆಟ್ನಲ್ಲಿ ಆಡುವುದಕ್ಕೆ ಸಜ್ಜಾಗಿದ್ದಾರೆ. ಪೂಜಾರ ಸಸೆಕ್ಸ್ನ ತವರಿನಲ್ಲಿ ಏಪ್ರಿಲ್ 7ರಿಂದ ಆರಂಭವಾಗಲಿರುವ ನಾಟಿಂಗ್ಹ್ಯಾಮ್ಷೈರ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಪೂಜಾರ ಕೌಂಟಿ ಅಲ್ಲದೆ 50 ಓವರ್ಗಳ ಟೂರ್ನಮೆಂಟ್ನಲ್ಲಿ ಕ್ಲಬ್ ಪರ ಆಡಲಿದ್ದಾರೆ.
ಪೂಜಾರ ಈ ಹಿಂದೆಯೂ ಕೌಂಟಿ ತಂಡಗಳಾದ ನಾಟಿಂಗ್ಹ್ಯಾಮ್ಷೈರ್, ಯಾರ್ಕ್ಷೈರ್ ಮತ್ತು ಡರ್ಬಿಷೈರ್ ಪರ ಆಡಿದ್ದರು. ಇನ್ನು, ಪೂಜಾರ ಮಾತ್ರವಲ್ಲದೆ ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ಆಸ್ಟ್ರೇಲಿಯಾದ ಜೋಶ್ ಫಿಲಿಪ್ಪೆ ಕೂಡ ಸಸೆಕ್ಸ್ ಪರ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಐಪಿಎಲ್ ದಿನಗಳಲ್ಲಿ ಈತ ನನ್ನ ನಿದ್ದೆಗೆಡಿಸಿದ ಏಕೈಕ ಆಟಗಾರ: ಗೌತಮ್ ಗಂಭೀರ್